ADVERTISEMENT

ಸಂಘರ್ಷದತ್ತ ಕಾಂಗ್ರೆಸ್‌ ಪಾದಯಾತ್ರೆ: ಮಾಡಿಯೇ ತೀರುತ್ತೇವೆಂದ ಡಿಕೆ ಶಿವಕುಮಾರ್‌

ಕೈ ಯಾತ್ರೆ ನಿಷೇಧಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 19:31 IST
Last Updated 12 ಜನವರಿ 2022, 19:31 IST
ಮೇಕೆದಾಟು ಪಾದಯಾತ್ರೆ
ಮೇಕೆದಾಟು ಪಾದಯಾತ್ರೆ   

ಬೆಂಗಳೂರು: ‘ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ತಡೆಯಲಾಗದಷ್ಟು ಸರ್ಕಾರ ಅಸಮರ್ಥವಾಗಿದೆಯೇ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ, ಪಾದಯಾತ್ರೆ ಹಾಗೂ ಆ ಉದ್ದೇಶಕ್ಕಾಗಿ ಸಾಗುವ ಜನ ಮತ್ತು ವಾಹನಗಳ ಓಡಾಟ ನಿಷೇಧಿಸಿ ರಾಜ್ಯ ಸರ್ಕಾರ ಬುಧವಾರ ರಾತ್ರಿ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ನಿಗದಿತ ಅವಧಿಯ ಯಾತ್ರೆಯನ್ನು ಮಧ್ಯದಲ್ಲೇ ಕೈಬಿಡುವ ಪ್ರಶ್ನೆಯೇ ಇಲ್ಲ. ಮುಂದುವರಿಸಿಯೇ ತೀರುತ್ತೇವೆ’ ಎಂದು ಹೇಳಿದ್ದಾರೆ.

ನಿಷೇಧದ ಆದೇಶಕ್ಕೆ ಕಾಂಗ್ರೆಸ್ ಸಡ್ಡು ಹೊಡೆದಿರುವುದರಿಂದಾಗಿ, ಗುರುವಾರ ರಾಮನಗರದಿಂದ ಬೆಂಗಳೂರು ಕಡೆಗೆ ಸಾಗಬೇಕಿರುವ ಯಾತ್ರೆ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಸರ್ಕಾರದ ಆದೇಶವೇನು?: ‘ನಮ್ಮ ನೀರು ನಮ್ಮ ಹಕ್ಕು ಅಥವಾ ಮೇಕೆದಾಟು ಪಾದಯಾತ್ರೆ’ ಹೀಗೆ ಯಾವುದೇ ಹೆಸರಿನಲ್ಲಿ ಅಂತರ್ ಜಿಲ್ಲೆ ಮತ್ತು ರಾಮನಗರ ಜಿಲ್ಲೆಯೊಳಗೆ ವಾಹನಗಳು ಹಾಗೂ ಜನರ ಓಡಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಆದೇಶದವರೆಗೆ ವಾಹನಗಳ ಓಡಾಟ ಮತ್ತು ಜನರ ಸಾಗಣೆಗೆ ನಿರ್ಬಂಧಿಸಲು ಜಿಲ್ಲಾಧಿಕಾರಿಗಳು, ಎಸ್ಪಿಗಳು, ಪೊಲೀಸ್‌ ಕಮಿಷನರ್‌ ಮತ್ತು ಸಾರಿಗೆ ಆಯುಕ್ತರು ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಯಾವುದೇ ವ್ಯಕ್ತಿ ನಿಯಮವನ್ನು ಉಲ್ಲಂಘಿಸಿದರೆ, ವಿಕೋಪ ನಿರ್ವಹಣೆ ಕಾಯ್ದೆ 2005 ರ ಸೆಕ್ಷನ್‌ 51 ಮತ್ತು 60 ರ ಅಡಿ ಹಾಗೂ ಐಪಿಸಿ 188 ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕೊರೊನಾ ಸೋಂಕು ಹರಡುವಿಕೆಯ ಸರಪಳಿ ತುಂಡರಿಸುವ ಉದ್ದೇಶದಿಂದ ಈಗಾಗಲೇ, ಪ್ರತಿಭಟನೆ, ರ್‍ಯಾಲಿ, ಹೆಚ್ಚಿನ ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಹೀಗಿದ್ದರೂ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಲು ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆದುಕೊಂಡು ಬರಲಾಗುತ್ತಿದೆ. ಇದರಿಂದ ರಾಜ್ಯದ ಅಪಾರ ಸಂಖ್ಯೆಯ ಜನರ ಆರೋಗ್ಯವನ್ನು ಅಪಾಯಕ್ಕೆ ಒಡ್ಡಲಾಗಿದೆ. ಅಲ್ಲದೆ, ಕೋವಿಡ್‌ ಪರಿಸ್ಥಿತಿಯೂ ಬಿಗಡಾಯಿಸಲಿದೆ ಎಂದು ಅವರು ಆದೇಶದಲ್ಲಿ ವಿವರಿಸಿದ್ದಾರೆ.

ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ, ಸರ್ಕಾರ ತೆಗೆದುಕೊಳ್ಳಬೇಕಾದ ಮುಂದಿನ ಹೆಜ್ಜೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವರ್ಚುವಲ್ ರೂಪದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಭಾಗಿಯಾಗಿದ್ದರು.

ಸರ್ಕಾರ, ಕಾಂಗ್ರೆಸ್‌ಗೆ ಹೈಕೋರ್ಟ್‌ ಚಾಟಿ

ಬೆಂಗಳೂರು: ‘ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ (ಕೆಪಿಸಿಸಿ) ನಡೆಸುತ್ತಿರುವ ಪಾದಯಾತ್ರೆ ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಕೆಪಿಸಿಸಿಗೂ ಕಿವಿ ಹಿಂಡಿದೆ.

‘ಪಾದಯಾತ್ರೆ ವೇಳೆ ಕೋವಿಡ್‌ ಮಾರ್ಗಸೂಚಿಗಳನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡಿದ್ದೀರಿ ಎಂಬ ಬಗ್ಗೆ ಸೂಕ್ತ ವಿವರಣೆ ನೀಡಿ’ ಎಂದು ಕೆಪಿಸಿಸಿಗೆ ಖಡಕ್‌ ನಿರ್ದೇಶನ ನೀಡಿದೆ.

‘ಪಾದಯಾತ್ರೆ ತಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿ ತಿಂಡ್ಲು ನಿವಾಸಿ ಎ.ವಿ.ನಾಗೇಂದ್ರ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ಹಾಗೂ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ಹಿರಿಯ ವಕೀಲ ಅರವಿಂದ ಕಾಮತ್ ಹಾಗೂ ಶ್ರೀಧರ ಪ್ರಭು, ’ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನಿರ್ಬಂಧಗಳ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಇದೇ 9ರ ಭಾನುವಾರದಿಂದ 10 ದಿನಗಳ ಪಾದಯಾತ್ರೆ ಆರಂಭಿಸಿದೆ. ಇದರಲ್ಲಿ ಕಾರ್ಯಕರ್ತರು, ಮುಖಂಡರು, ಸಾಂಸ್ಕೃತಿಕ ತಂಡಗಳೂ ಸೇರಿದಂತೆ ಸಾವಿರಾರು ಜನರು ಹಾಗೂ ಪಟ್ಟಣ ಪ್ರದೇಶಗಳ ಜನರು ಭಾಗವಹಿಸುತ್ತಿದ್ದಾರೆ. ಇದರಿಂದ ಕೋವಿಡ್‌ ವೇಗವಾಗಿ ಹರಡುವ ಸಾಧ್ಯತೆ ಇದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಈತನಕ ಯಾವುದೇ ಕ್ರಮ ಜರುಗಿಸಿಲ್ಲ‘ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಸದ್ಯ 70 ಸಾವಿರ ಸಕ್ರಿಯ ಪ್ರಕರಣಗಳಿವೆ. ಓಮಿಕ್ರಾನ್ ಎಂಬ ಹೊಸ ಕೊರೊನಾ ರೂಪಾಂತರಿ ತಳಿಯಿಂದ ರಾಜ್ಯವು ತತ್ತರಿಸುತ್ತಿದೆ. ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ನಡೆಸಲಾಗುತ್ತಿರುವ ಪಾದಯಾತ್ರೆಯನ್ನು ತಕ್ಷಣವೇ ನಿರ್ಬಂಧಿಸಬೇಕಿದೆ. ಇಲ್ಲವಾದಲ್ಲಿ ಸಾರ್ವಜನಿಕರು ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಯಾರು ಏನೇ ಮಾಡಿದರೂ ಪಾದಯಾತ್ರೆ ನಿಲ್ಲದು: ಡಿಕೆಶಿ

ರಾಮನಗರ: ‘ಗುರುವಾರ ಬೆಳಿಗ್ಗೆ 7–8 ಗಂಟೆ ವೇಳೆಗೆ ಸಾಕಷ್ಟು ಬೆಳವಣಿಗೆ ನಡೆಯಬಹುದು. ಏನೇ ಆದರೂ ರಾಮನಗರದಿಂದ ಪಾದಯಾತ್ರೆ ಮುಂದುವರಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿನ ಐಜೂರು ವೃತ್ತದಲ್ಲಿ ಬುಧವಾರ ರಾತ್ರಿ ಪಾದಯಾತ್ರೆ ಅಂಗವಾಗಿ ನಡೆದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ಜನತಾದಳದ ದೊಡ್ಡ ನಾಯಕ ಕುಮಾರಣ್ಣ ನಾವು ರಾಮನಗರದಿಂದ ಪಾದಯಾತ್ರೆ ಮಾಡಬಾರದು ಎನ್ನುತ್ತಾರೆ. ನಿನ್ನೆ ಅಶ್ವತ್ಥನಾರಾಯಣ ಸುದ್ದಿಗೋಷ್ಠಿ ನಡೆಸಿ ತಾವೇ ಮೇಕೆದಾಟು ಅಣೆಕಟ್ಟೆ ಕಟ್ಟುವುದಾಗಿ ಹೇಳಿದ್ದಾರೆ. ಹಾಗೆ ನಡೆದುಕೊಂಡರೆ ಸಂತೋಷ. ‘ಏನಾದರೂ ಮಾಡಿ ಗಲಾಟೆ ಮಾಡಿ’ ಎಂದೂ ಅವರು ಪ್ರಚೋದನೆ ನೀಡಿ ಹೋಗಿದ್ದಾರೆ. ಹೀಗಾಗಿಯೇ ಇಂದು ಎಲ್ಲ ಕಡೆ ಪೊಲೀಸರು ನಿಂತಿದ್ದಾರೆ. ಪೊಲೀಸರು ಏನೇ ದೊಣ್ಣೆ ಹಿಡಿದು ನಿಂತರೂ ಯಾರು ಹೆದರಬೇಕಾಗಿಲ್ಲ’ ಎಂದರು.

‘ ಕೆಂಗಲ್‌ ಹನುಮಂತಯ್ಯ, ಎಚ್‌.ಡಿ. ದೇವೇಗೌಡ, ಕುಮಾರಸ್ವಾಮಿ ಈ ನೆಲದಿಂದ ಮುಖ್ಯಮಂತ್ರಿ ಆಗಿದ್ದಾರೆ. ನಾವು ಹೊರಗಿನವರಿಗೆ ಸಾಕಷ್ಟು ತ್ಯಾಗ ಮಾಡಿದ್ದೇವೆ. ಈಗ ಜಿಲ್ಲೆಯ ಜನರಿಗೋಸ್ಕರ ಇಡೀ ರಾಜ್ಯ ಕಾಂಗ್ರೆಸ್ ನಿಮ್ಮ ಮುಂದೆ ನಿಂತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.