ADVERTISEMENT

ಮೇಕೆದಾಟು ಯೋಜನೆಗೆ ಅಡ್ಡಿಬೇಡ: ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಯಡಿಯೂರಪ್ಪ ಪತ್ರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 20:09 IST
Last Updated 3 ಜುಲೈ 2021, 20:09 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯಿಂದಲೂ ಧಕ್ಕೆಯಾಗದು ಈ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ 400 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಅವಕಾಶವಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ 4.75 ಟಿಎಂಸಿ ಅಡಿ ನೀರನ್ನು ಕೊಂಡೊಯ್ಯುವುದಕ್ಕೂ ಅನುಮತಿ ನೀಡಲಾಗಿದೆ. ರಾಜ್ಯವು ತನ್ನ ಪಾಲಿನ ನೀರನ್ನಷ್ಟೇ ಬಳಸಿಕೊಳ್ಳುತ್ತಿದೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಮೇಕೆದಾಟು ಯೋಜನೆಯಿಂದ ತಮಿಳುನಾಡು ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೂ, ತಮಿಳುನಾಡು ಸರ್ಕಾರವು ಯೋಜನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಬಂಧಿಸಿದಂತೆ ಪರಿಸರ ಹಾನಿ ಅಂದಾಜು (ಇಐಎ) ಅಧ್ಯಯನ ನಡೆಸುವುದಕ್ಕೆ ಅನುಮತಿ ಕೋರಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾತಕ್ಕೆ ಅರ್ಜಿ ಸಲ್ಲಿಸಿದೆ ಎಂದು ಯಡಿಯೂರಪ್ಪ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ADVERTISEMENT

ತಮಿಳುನಾಡು ಸರ್ಕಾರವು ಕಾವೇರಿ ಕಣಿವೆಯಲ್ಲಿ ಎರಡು ಜಲ ವಿದ್ಯುತ್‌ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಕುಂಡಾಹ್‌ ಮತ್ತು ಸಿಲ್ಲಹಳ್ಳ ಜಲ ವಿದ್ಯುತ್‌ ಯೋಜನೆಗಳನ್ನು ರೂಪಿಸಲಾಗಿದೆ. ಕುಂಡಾಹ್‌ ಯೋಜನೆಗೆ ಫೆಬ್ರುವರಿ 12ರಂದು ಕೇಂದ್ರ ಪರಿಸರ
ಸಚಿವಾಲಯ ಅನುಮತಿ ನೀಡಿದೆ. ಸಿಲ್ಲಹಳ್ಳ ಯೋಜನೆಯ ಪ್ರಸ್ತಾವ ಪರಿಶೀಲನೆಯಲ್ಲಿದೆ. ಈ ಎರಡೂ ಯೋಜನೆಗಳ ವಿಚಾರದಲ್ಲಿ ತಮಿಳುನಾಡು ಸರ್ಕಾರವು ಕರ್ನಾಟಕದ ಸಹಮತಿಯನ್ನು ಪಡೆದಿರುವುದಿಲ್ಲ. ಅಲ್ಲದೇ, ಮೆಟ್ಟೂರಿನಿಂದ ಕೆಳಭಾಗದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಕೈಗೆತ್ತಿ ಕೊಂಡಿರುವುದಾಗಿ ತಮಿಳುನಾಡು ಸರ್ಕಾರ, ಮದ್ರಾಸ್‌ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಬಹಿರಂಗಪಡಿಸಿದೆ ಎಂದು ಉಲ್ಲೇಖಿಸಿದ್ದಾರೆ.

‘ಎರಡೂ ರಾಜ್ಯಗಳು ಸೌಹಾರ್ದ ಯುತವಾಗಿ ಮುನ್ನಡೆಯಬೇಕಿದೆ. ತಮಿಳುನಾಡು ಸರ್ಕಾರವು, ಮೇಕೆದಾಟು ಯೋಜನೆಯನ್ನು ವಿರೋಧಿಸದೇ ಸಹಕಾರ ನೀಡಿದರೆ, ರಾಜ್ಯವೂ ಯಾವುದೇ ವಿಷಯಗಳಲ್ಲಿ ಸಹಕಾರ ನೀಡಲು ಸಿದ್ಧ. ಇಂತಹ ಸಮಸ್ಯೆಗಳು ಉದ್ಭವಿಸಿದಾಗ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಸಂಬಂಧಿಸಿದ ಅಧಿಕಾರಿಗಳ ಉಪಸ್ಥಿತಿಯಲ್ಲಿ ದ್ವಿಪಕ್ಷೀಯ ಸಭೆಗಳನ್ನು ನಡೆಸುವುದು ಉತ್ತಮ’ ಎಂದು ಸಲಹೆನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.