ADVERTISEMENT

ಮೇಕೆದಾಟು: ಹೊಸ ಅಧ್ಯಯನಕ್ಕೆ ಕಾವೇರಿ ನೀರಾವರಿ ನಿಗಮ ತೀರ್ಮಾನ

67.16 ಟಿಎಂಸಿ ಅಡಿ ನೀರು ಸಂಗ್ರಹ: ಡಿಪಿಆರ್‌ ‍ಪರಿಶೀಲಿಸಿದ ಕೇಂದ್ರ ಜಲ ಆಯೋಗ

ಮಂಜುನಾಥ್ ಹೆಬ್ಬಾರ್‌
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
<div class="paragraphs"><p>ಮೇಕೆದಾಟು ಪ್ರದೇಶ</p></div>

ಮೇಕೆದಾಟು ಪ್ರದೇಶ

   

ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತು ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ಕೆಲವೊಂದು ಅವಲೋಕನಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಯನ ಹಾಗೂ ಸಮೀಕ್ಷೆ ನಡೆಸಲು ಕಾವೇರಿ ನೀರಾವರಿ ನಿಗಮವು ತೀರ್ಮಾನಿಸಿದೆ. 

ರಾಜ್ಯ ಸರ್ಕಾರ ಸಲ್ಲಿರುವ ವಿಸ್ತೃತ ಯೋಜನಾ ವರದಿಯ (ಡಿಪಿಆರ್‌) ಪರಿಶೀಲನೆ ನಡೆಸಿರುವ ಜಲ ಆಯೋಗವು ಭೂ ತಾಂತ್ರಿಕ ತನಿಖೆಗಳ ಕುರಿತು ಅವಲೋಕನಗಳನ್ನು ಮಾಡಿದೆ ಹಾಗೂ ಹೊಸ ಅಧ್ಯಯನಗಳನ್ನು ನಡೆಸುವಂತೆ ಈಚೆಗೆ ನಿರ್ದೇಶನ ನೀಡಿತ್ತು. 

ADVERTISEMENT

ಈ ಯೋಜನೆಯಡಿ 67.16 ಟಿಎಂಸಿ ಅಡಿ ನೀರು ಸಂಗ್ರಹಿಸಲು ಸಮತೋಲನ ಜಲಾಶಯ ನಿರ್ಮಿಸಲಾಗುತ್ತದೆ. ಜತೆಗೆ, ಸೇತುವೆ, ಭೂಗತ ವಿದ್ಯುತ್‌ ಕೇಂದ್ರ ಹಾಗೂ ಸುರಂಗ ನಿರ್ಮಾಣ ಮಾಡಲಾಗುತ್ತದೆ. ಜಲಾಶಯದ ಮುಂಭಾಗದಲ್ಲಿ 4.75 ಟಿಎಂಸಿ ಅಡಿ ಕುಡಿಯುವ ನೀರು ಮೇಲೆತ್ತಲು ಜಾಕ್‌ವೆಲ್‌ ಕಮ್‌ ಪಂಪ್‌ಹೌಸ್‌ ನಿರ್ಮಾಣವನ್ನೂ ಒಳಗೊಂಡಿದೆ. ಯೋಜನೆಗೆ ನದಿ ಭಾಗದ 1,130 ಹೆಕ್ಟೇರ್ ಸೇರಿದಂತೆ 5,267 ಹೆಕ್ಟೇರ್ ಅರಣ್ಯ ಹಾಗೂ ಕಂದಾಯ ಭೂಮಿ ಬಳಕೆಯಾಗಲಿದೆ. ಜಲಾಶಯ ನಿರ್ಮಾಣದಿಂದಾಗಿ ಮಡಿವಾಳ, ಕೊಂಗೆದೊಡ್ಡಿ, ಸಂಗಮ, ಬೊಮ್ಮಸಂದ್ರ ಹಾಗೂ ಮುತ್ತತ್ತಿ ಗ್ರಾಮಗಳು ಮುಳುಗಡೆಯಾಗಲಿವೆ. 

3,946 ಹೆಕ್ಟೇರ್‌ನಲ್ಲಿ ಮರಗಳ ಎಣಿಕೆ:

 ಕಾವೇರಿ ವನ್ಯಜೀವಿ ಅಭಯಾರಣ್ಯವು ದಕ್ಷಿಣ ಭಾರತದ ಕುರುಚಲು ಕಾಡುಗಳು, ಬಿದಿರಿನ ಕಾಡುಗಳು ಮತ್ತು ನಿತ್ಯಹರಿದ್ವರ್ಣ ಶೋಲಾ ಸೇರಿದಂತೆ ಐದು ವಿಧದ ಕಾಡುಗಳನ್ನು ಒಳಗೊಂಡಿದೆ. ಯೋಜನಾ ಪ್ರದೇಶದ ಪ್ರತಿ ಹೆಕ್ಟೇರ್‌ನಲ್ಲಿ 300–400 ಮರಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಮಾಣಿತ ಮಾದರಿ ವಿಧಾನಗಳನ್ನು ಅಳವಡಿಸಿಕೊಂಡು 3,946 ಹೆಕ್ಟೇರ್‌ನಲ್ಲಿ ಮರಗಳ ಎಣಿಕೆ ನಡೆಸಲಾಗುತ್ತದೆ. ಕಾಡುಪ್ರಾಣಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಧ್ಯಯನ ಹಾಗೂ ಸಮೀಕ್ಷೆ ನಡೆಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ಸ್ಪಷ್ಟಪಡಿಸಿದೆ. 

ಯಾವ ವಿಷಯಗಳಲ್ಲಿ ಅಧ್ಯಯನ  
  • ಭೂತಾಂತ್ರಿಕ ಅಧ್ಯಯನ: *ಅರಣ್ಯ ತಿರುವು ಪ್ರಸ್ತಾವನೆಯ ಭಾಗವಾಗಿ ಕಲ್ಲಿನ ಕಂಬಗಳನ್ನು ಬಳಸಿಕೊಂಡು ಎಫ್‌ಆರ್‌ಎಲ್‌ ಗಡಿ ಗುರುತಿಸುವಿಕೆ

  • ಅರಣ್ಯ ತಿರುವು ಪ್ರಸ್ತಾವನೆಯ ಭಾಗವಾಗಿ ಮರಗಳ ಎಣಿಕೆ

  • ವನ್ಯಜೀವಿ ಸಂರಕ್ಷಣಾ ಯೋಜನೆಯ ಭಾಗವಾಗಿ ಜೀವವೈವಿಧ್ಯಗಳ ಮೇಲಾಗುವ ಪರಿಣಾಮಗಳ ಅಧ್ಯಯನ 

  • ಪರಿಸರ ಪರಿಣಾಮದ ಅಧ್ಯಯನದ ಭಾಗವಾಗಿ ಮೂಲ ದತ್ತಾಂಶ ಸಂಗ್ರಹ

ಸಮೀಕ್ಷೆಯಿಂದ ಉಂಟಾಗುವ ಸಮಸ್ಯೆಗಳು
  • ಆವಾಸಸ್ಥಾನ ನಾಶ: ಭೂತಾಂತ್ರಿಕ ಅಧ್ಯಯನದಿಂದಾಗಿ ದಟ್ಟವಾದ ಸಸ್ಯವರ್ಗ ನಾಶವಾಗಲಿದೆ. 

  • ಜನರ ಓಡಾಟ, ಡ್ರಿಲ್ಲಿಂಗ್ ರಿಗ್‌ಗಳಿಂದ ಶಬ್ದ ಮತ್ತು ಕಂಪನ, ವಾಹನಗಳ ಸಂಚಾರದಿಂದಾಗಿ  ಕಾಡು
    ಪ್ರಾಣಿಗಳಿಗೆ ತೊಂದರೆಉಂಟಾಗಲಿದೆ. 

  • ಕೊರೆಯುವ ಚಟುವಟಿಕೆಗಳಿಂದ ಮಣ್ಣಿನ ಸವೆತ ಹೆಚ್ಚಾಗಲಿದೆ. ಭಾರೀ ಮಳೆಯೊಂದಿಗೆ ಮಾಲಿನ್ಯಕಾರಕಗಳು ಜಲಚರ ಪರಿಸರ ವ್ಯವಸ್ಥೆಗಳಿಗೆ ಪ್ರವೇಶಿಸಲು ಕಾರಣವಾಗಬಹುದು.
    ಇದು ಸೂಕ್ಷ್ಮ ಪ್ರಭೇದಗಳ ಮೇಲೆ ಪರಿಣಾಮ ಬೀರುತ್ತದೆ.

  • ವನ್ಯಜೀವಿ ಅಭಯಾರಣ್ಯಗಳ ಒಳಗೆ ಕಾಂಕ್ರೀಟ್ ಕಂಬಗಳ ಬಳಸುವುದರಿಂದ ಪ್ರಾಣಿಗಳ ಸುರಕ್ಷತೆ ಮತ್ತು ಆವಾಸಸ್ಥಾನದ ಸಮಗ್ರತೆಗೆ ದೀರ್ಘಕಾಲೀನ ಅಪಾಯಗಳನ್ನು ಒಡ್ಡುತ್ತದೆ.

ಸಮೀಕ್ಷೆಗೂ ವನ್ಯಜೀವಿ ಮಂಡಳಿ ಒಪ್ಪಿಗೆ ಬೇಕು
ಅಭಯಾರಣ್ಯದಲ್ಲಿ ಹೊಸ ಅಧ್ಯಯನ ಹಾಗೂ ಸಮೀಕ್ಷೆ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಅಗತ್ಯ. ಮೇಕೆದಾಟು ಯೋಜನೆಯ ಸಮೀಕ್ಷೆ ನಡೆಸಲು ಅನುಮತಿ ನೀಡುವಂತೆ ಕೋರಿ ಕಾವೇರಿ ನೀರಾವರಿ ನಿಗಮವು ಪಿಸಿಸಿಎಫ್‌ (ವನ್ಯಜೀವಿ) ಮೂಲಕ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಫೆಬ್ರುವರಿ 4ರಂದು ಪ್ರಸ್ತಾವ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.