ADVERTISEMENT

ಕಾಂಗ್ರೆಸ್‌ ಆಲಸ್ಯದಿಂದ ಮೇಕೆದಾಟು ಯೋಜನೆಗೆ ಹಿನ್ನಡೆ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 10:32 IST
Last Updated 2 ಮಾರ್ಚ್ 2022, 10:32 IST
   

ಬೆಂಗಳೂರು: ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯ ಬಗ್ಗೆ ಅವರು ತೋರಿದ ಆಲಸ್ಯತನ ಮತ್ತು ಹೊಣೆಗೇಡಿತನ ಜಲಸಂಪನ್ಮೂಲ ಇಲಾಖೆಯ ಕಡತಗಳಲ್ಲಿ ಲಭ್ಯವಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತು ಸತ್ಯದ ಮಾಹಿತಿ ಇಲಾಖೆಯ ಕಡತಗಳಲ್ಲಿ ಲಭ್ಯವಿದೆ. ಯಾರ ಆಡಳಿತದ ಕಾಲದಲ್ಲಿ ಎಷ್ಟು ವಿಳಂಬವಾಗಿದೆ ಎಂಬ ವಿವರಗಳೂ ಇದೆ. ಇಲಾಖೆ ಮಾಹಿತಿಯನ್ನು ಕಾಂಗ್ರೆಸ್ಸಿಗರು ಸುಳ್ಳು ಎನ್ನುತ್ತಿದ್ದಾರೆ. ಯಾರೂ ಇದರಲ್ಲಿ ಸುಳ್ಳು ಹೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ತಾವು ಮಾಡಿದ ಅನ್ಯಾಯ ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ಮಾಹಿತಿ ಸುಳ್ಳು ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಇವರು ಮಾಡುತ್ತಿರುವ ಪಾದಯಾತ್ರೆ ಒಂದು ಯೋಜನೆಯ ಅನುಷ್ಟಾನಕ್ಕಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲ. ಅದೊಂದು ಪ್ರಚಾರ ಯಾತ್ರೆ ಎಂದರು.

ADVERTISEMENT

ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಸಿದ್ದರಾಮಯ್ಯ ಮತ್ತು ಇತರ ನಾಯಕರು ಬಿಜೆಪಿಯ ದಲಿತ ನಾಯಕರ ಬಗ್ಗೆ ಕೀಳು ಅಭಿರುಚಿಯ, ಮೂದಲಿಕೆಯ ಮಾತುಗಳನ್ನು ಆಡಿದ್ದರು.ಈಗ ಮೇಕೆದಾಟು ಪಾದಯಾತ್ರೆಯ ಉದ್ದಕ್ಕೂ ಕೇವಲ ನಿಂದನಾತ್ಮಕ, ಮೂದಲಿಕೆಯ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸ್ಸಿಗರಿಗೆ ಮತದಾರರು ಮತ್ತೊಮ್ಮೆ ಪಾಠ ಕಲಿಸುತ್ತಾರೆ ಎಂದೂ ಕಾರಜೋಳ ಹೇಳಿದರು.

ಹಿಂದೆ 2013 ರಲ್ಲಿ ಕೃಷ್ಣಾ ಕಣಿವೆಯಲ್ಲಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸಿಗರು ಕೃಷ್ಣಾ ಕಣಿವೆಯ ಭಾಗ್ಯಕ್ಕೆ ಅನ್ಯಾಯವೆಸಗಿದರು. ಈಗ ಕಾವೇರಿ ಕಣಿವೆಯಲ್ಲಿ ಪಾದಯಾತ್ರೆ ಮಾಡಿ ಮತ್ತಷ್ಟು ಅನ್ಯಾಯಕ್ಕೆ ಕಾರಣವಾಗುತ್ತಿದ್ದಾರೆ. ತಾವು ನೀಡಿದ ಹೇಳಿಕೆಗಳಿಗೆ ಬದ್ಧತೆ ತೋರುವ ಮತ್ತು ಜಾರಿ ಮಾಡುವ ಜಾಯಮಾನ ಕಾಂಗ್ರೆಸ್‌ಗೆ ಇಲ್ಲ ಎಂದೂ ತಿಳಿಸಿದರು.

ಮೇಕೆದಾಟು ಯೋಜನೆ ವಿವರ:

(ವರ್ಷ, ತಿಂಗಳು, ವ್ಯರ್ಥವಾದ ಸಮಯ)

* 2013 ನವೆಂಬರ್‌, ಡಿಪಿಆರ್‌ ತಯಾರಿಸಲು 4 ಜಿ ವಿನಾಯಿತಿಗೆ ಅರ್ಜಿ, 6 ತಿಂಗಳು

* 2014 ಏಪ್ರಿಲ್‌, 4 ಜಿ ವಿನಾಯಿತಿ ಅರ್ಜಿ ತಿರಸ್ಕೃತ

* 2014 ಅಕ್ಟೋಬರ್‌, ಜಾಗತಿಕ ಟೆಂಡರ್‌ ಆಹ್ವಾನ,13 ತಿಂಗಳು

* 2015 ನವೆಂಬರ್‌, ಮೊತ್ತ ಅಧಿಕವೆಂದು ಟೆಂಡರ್ ತಿರಸ್ಕಾರ

* 2015 ಡಿಸೆಂಬರ್‌, 4 ಜಿ ವಿನಾಯಿತಿಗೆ ಮತ್ತೊಮ್ಮೆ ಅರ್ಜಿ, 1 ತಿಂಗಳು

* 2016 ಫೆಬ್ರುವರಿ, 4 ಜಿ ವಿನಯಿತಿಗೆ ಒಪ್ಪಿಗೆ ನೀಡಿದ ಸರ್ಕಾರ, 3 ತಿಂಗಳು, ಡಿಪಿಆರ್‌ ತಯಾರಿಸಲು ಇಐ ಟೆಕ್ನಾಲಜಿಸ್‌ ಕಂಪನಿ ಜತೆ ಒಪ್ಪಂದ

* 2016 ಜೂನ್ ₹ 5,612 ಕೋಟಿ ಡಿಪಿಆರ್ ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆ 3 ತಿಂಗಳು

* 2017 ಮಾರ್ಚ್, ಸರ್ಕಾರದಿಂದ ತಾತ್ವಿಕ ಅನುಮೋದನೆ 10 ತಿಂಗಳು

* 2017 ಜೂನ್, ಕೇಂದ್ರ ಜಲ ಆಯೋಗಕ್ಕೆ ಡಿಪಿಆರ್ ಶೀರ್ಷಿಕೆಯಡಿ ದಾಖಲೆ ಸಲ್ಲಿಕೆ 2 ತಿಂಗಳು

* 2018 ಮಾರ್ಚ್, ಕೇಂದ್ರ ಜಲ ಆಯೋಗದ ಸೂಚನೆಯಂತೆ ಡಿಪಿಆರ್ ಬದಲಿಗೆ ಪೂರ್ವ ಕಾರ್ಯಸಿದ್ಧತಾ ವರದಿ (PFR) ಎಂದು ನಾಮಕರಣ 10 ತಿಂಗಳು

* 18-01-2019 ಜನವರಿ ವಿವರವಾದ ಡಿ.ಪಿ.ಆರ್ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆ 10 ತಿಂಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.