ಮೈಸೂರು: ' ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದು ನಿಮಿಷದಲ್ಲಿ ಪ್ರಧಾನಮಂತ್ರಿಯಿಂದ ಒಪ್ಪಿಗೆ ಕೊಡಿಸುತ್ತೇನೆ' ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ' ಕಾಂಗ್ರೆಸ್ ನವರಿಗೆ ತಮಿಳುನಾಡಿನವರನ್ನು ಒಪ್ಪಿಸುವ ಶಕ್ತಿ ಇಲ್ಲ. ಅವರನ್ನು ಧಿಕ್ಕರಿಸುವ ಶಕ್ತಿಯೂ ಇಲ್ಲ' ಎಂದು ಟೀಕಿಸಿದರು.
' ತಮಿಳುನಾಡನ್ನು ಧಿಕ್ಕರಿಸಿ ಯೋಜನೆ ಮಾಡಿದರೆ ಅದು ಆಗುತ್ತದೆ. ತಮಿಳುನಾಡು ಸರ್ಕಾರವನ್ನು ಒಪ್ಪಿಸದೇ ಮೇಕೆದಾಟು ಯೋಜನೆ ಕಚೇರಿ ತೆರೆದರೆ ಏನು ಪ್ರಯೋಜನ' ಎಂದು ಪ್ರಶ್ನಿಸಿದರು.
' ಯೋಜನೆ ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ ನವರು. ಸುಮ್ಮನೆ ಕಾಲಾಹರಣ ಮಾಡಿ, ನಮ್ಮ ಮೇಲೆ ಜವಾಬ್ದಾರಿ ಹೊರಿಸಿದರೆ ಏನು ಪ್ರಯೋಜನ' ಎಂದರು.
' ಕಾಂಗ್ರೆಸ್ ನವರಿಗೆ ನನ್ನನ್ನು ಕಂಡರೆ ಭಯ. ಹೀಗಾಗಿಯೇ ಪದೇ ಪದೇ ನನ್ನ ಹೆಸರು ಜಪಿಸುತ್ತಾರೆ. ಮಂಡ್ಯಕ್ಕೆ ನಾನು ಕೇವಲ ಸಂಸದರ ಅನುದಾನ ತಂದಿಲ್ಲ. ಹಲವು ವಿಶೇಷ ಅನುದಾನವನ್ನೂ ತಂದಿದ್ದೇವೆ. ಇದರ ಮಾಹಿತಿ ಇಲ್ಲದೆಯೇ ಮಾತನಾಡಬಾರದು' ಎಂದರು.
ಪ್ರತಿಭಟನೆ: ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲು ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ದೂರಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.