
ಬೆಂಗಳೂರು: ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ನೀಡಿದ್ದ ತನ್ನದೇ ತಡೆಯಾಜ್ಞೆಯನ್ನು ಏಕಸದಸ್ಯ ನ್ಯಾಯಪೀಠವೊಂದು ಕೆಲವೇ ಗಂಟೆಗಳ ಅಂತರದಲ್ಲಿ ತೆರವುಗೊಳಿಸಿದ ಅಪರೂಪದ ಘಟನೆಗೆ ಕರ್ನಾಟಕ ಹೈಕೋರ್ಟ್ ಸಾಕ್ಷಿಯಾಯಿತು.
ಸರ್ಕಾರದ ಅಧಿಸೂಚನೆ ಪ್ರಶ್ನಿಸಿ, ‘ಬೆಂಗಳೂರು ಹೋಟೆಲ್‌ಗಳ ಸಂಘ’ದ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಬೆಳಗಿನ ಕಲಾಪದಲ್ಲಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಬಿ.ಕೆ.ಪ್ರಶಾಂತ್ ಕುಮಾರ್ ಅವರ ವಾದ ಆಲಿಸಿದ ನ್ಯಾಯಪೀಠ, ಅಧಿಸೂಚನೆಗೆ ಮಧ್ಯಂತರ ತಡೆ ನೀಡಿತು. ‘ರಾಜ್ಯ ಸರ್ಕಾರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿದೆ’ ಎಂದು ಆದೇಶಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಈ ತಡೆ ಆದೇಶ ಹೊರಬೀಳುತ್ತಿದ್ದಂತೆಯೇ, ಕಲಾಪ ಕೊನೆಗೊಳ್ಳುವ ಸಮಯದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಹಾಗೂ ಮಧ್ಯಂತರ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್ ನ್ಯಾಯಪೀಠದ ಮುಂದೆ ಹಾಜರಾಗಿ, ‘ಪ್ರತಿವಾದಿಗಳ ಆಕ್ಷೇಪಣೆ ಆಲಿಸದೇ ಅರ್ಜಿದಾರರ ಮಧ್ಯಂತರ ಮನವಿಯನ್ನು ಮಾನ್ಯ ಮಾಡಲಾಗಿದೆ’ ಎಂದು ಆದೇಶಕ್ಕೆ ತೀವ್ರ ತಕರಾರು ವ್ಯಕ್ತಪಡಿಸಿದರು.
ನ್ಯಾಯಪೀಠದ ಮಧ್ಯಂತರ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಶಶಿಕಿರಣ ಶೆಟ್ಟಿ ಅವರು, ‘ಋತುಚಕ್ರದ ರಜೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀತಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಆದೇಶಿಸಿದೆ. ಇದಕ್ಕೆ ಅನುಗುಣವಾಗಿಯೇ ರಾಜ್ಯ ಕಾನೂನು ಆಯೋಗ ಶಿಫಾರಸು ಮಾಡಿದೆ. ಇದನ್ನೆಲ್ಲಾ ಪರಿಗಣಿಸಿಯೇ, ರಾಜ್ಯ ಸರ್ಕಾರ ಸಾಂವಿಧಾನಿಕವಾಗಿ ಕೊಡಮಾಡಲಾಗಿರುವ 142ನೇ ವಿಧಿಯಡಿ ತನ್ನ ಅಧಿಕಾರ ಬಳಸಿ ಈ ಕ್ರಮ ಕೈಗೊಂಡಿದೆ. ಅಧಿಸೂಚನೆ ಕಾನೂನುಬದ್ಧವಾಗಿಯೇ ಇದೆ. ಹೀಗಿರುವಾಗ, ಸರ್ಕಾರದ ವಿಸ್ತೃತ ವಾದ ಆಲಿಸದೆಯೇ ಅಧಿಸೂಚನೆಗೆ ತಡೆ ನೀಡಿರುವುದು ಸಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿ ತಡೆ ತೆರವುಗೊಳಿಸುವಂತೆ ಮನವಿ ಮಾಡಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ ಬೆಳಿಗ್ಗೆಯಷ್ಟೇ ಸರ್ಕಾರದ ಅಧಿಸೂಚನೆಗೆ ನೀಡಿದ್ದ ತನ್ನದೇ ತಡೆಯಾಜ್ಞೆ ಆದೇಶವನ್ನು ಹಿಂಪಡೆಯಿತು. ಬುಧವಾರ (ಡಿ.10) ಉಭಯ ಪಕ್ಷಕಾರರ ವಾದ ಆಲಿಸಿ, ‘ಮಧ್ಯಂತರ ತಡೆ ಆದೇಶದ ಬಗ್ಗೆ ಸೂಕ್ತ ನಿರ್ಣಯ ಹೊರಡಿಸಲಾಗುವುದು’ ಎಂದು ತಿಳಿಸಿತು.
ಅರ್ಜಿಯಲ್ಲಿ ಏನಿದೆ?: ‘ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ಮಟ್ಟಿಗೆ ವೇತನ ಸಹಿತ ಮುಟ್ಟಿನ ರಜೆ ಒದಗಿಸಬೇಕು’ ಎಂದು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಅಧಿಸೂಚನೆ ಹೊರಡಿಸಿತ್ತು. ‘ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದ್ದು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.