ADVERTISEMENT

ರಾಮ ಬೇರೆಯಲ್ಲ, ಗಾಂಧಿ ಬೇರೆಯಲ್ಲ: ಬಸವರಾಜ ಬೊಮ್ಮಾಯಿ

ರಾಮ ಮತ್ತು ಮಹಾತ್ಮ ಗಾಂಧೀಜಿಯವರನ್ನು ಬೇರ್ಪಡಿಸುವ ಪಾಪದ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:25 IST
Last Updated 23 ಡಿಸೆಂಬರ್ 2025, 6:25 IST
   

ಬೀದರ್‌: ‘ರಾಮ ಬೇರೆಯಲ್ಲ, ಮಹಾತ್ಮ ಗಾಂಧಿ ಬೇರೆಯಲ್ಲ. ಗಾಂಧಿ ಅವರ ಆತ್ಮ ರಾಮನ ಹೆಸರು ಹೇಳುತ್ತದೆ. ಗಾಂಧಿ ತಮ್ಮ ಕೊನೆ ಗಳಿಗೆಯಲ್ಲಿ ಅದೇ ಹೆಸರು ಹೇಳಿದ್ದರು. ರಾಮನ ವಿಚಾರವನ್ನೇ ಗಾಂಧೀಜಿ ಅವರು ಅವರ ಜೀವನದುದ್ದಕ್ಕೂ ಪ್ರತಿಪಾದಿಸಿದ್ದರು. ಗ್ರಾಮ ರಾಜ್ಯ ರಾಮ ರಾಜ್ಯ ಎಂದು ಹೇಳಿದ್ದರು. ಮಹಾತ್ಮ ಗಾಂಧಿ ಅಂತರಾತ್ಮದಲ್ಲಿರುವ ಹೆಸರನ್ನೇ ನಾವು ಉದ್ಯೋಗ ಖಾತ್ರಿ ಯೋಜನೆಗೆ ‘ವಿಬಿ–ಜಿ ರಾಮ್‌ ಜಿ’ ಎಂಬುದಾಗಿ ಮಾಡಿದ್ದೇವೆ’ ಎಂದು ಸಂಸದರೂ ಆದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡರು.

ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಿಸಿರುವುದಕ್ಕೆ ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ಕೊಟ್ಟಿರುವುದರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಗಾಂಧೀಜಿಯವರನ್ನು ಒಂದು ಬಾರಿಯಲ್ಲ ಹಲವು ಬಾರಿ ಕೊಲೆ ಮಾಡಿರುವುದು ಕಾಂಗ್ರೆಸ್‌. ಕಾಂಗ್ರೆಸ್‌ ವಿಸರ್ಜನೆ ಮಾಡಬೇಕೆಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೆ, ಅದನ್ನು ವಿಸರ್ಜನೆ ಮಾಡಲಿಲ್ಲ. ಅಂದೇ ಮಹಾತ್ಮ ಕೊಲೆ ಆಯಿತು. ಗಾಂಧಿ ಅವರು ಪ್ರಜಾತಂತ್ರ, ಸಂವಿಧಾನವನ್ನು ಒಪ್ಪಿಕೊಂಡಿದ್ದರು. ಅದಕ್ಕೆ ಅಪಚಾರ ಎಸಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಇನ್ನೊಂದು ಸಲ ಗಾಂಧಿ ಕೊಲೆ ಮಾಡಲಾಯಿತು. ಹೀಗೆ ಹಲವು ಸಲ ಕಾಂಗ್ರೆಸ್ ಪಕ್ಷ ಗಾಂಧೀಜಿ ಅವರ ವೈಚಾರಿಕ ವಿಚಾರಧಾರೆಗಳಿಗೆ ವಿರುದ್ಧವಾಗಿ ಕೆಲಸ ಮಾಡಿದೆ ಎಂದು ಟೀಕಿಸಿದರು.

ADVERTISEMENT

ಮಹಾತ್ಮ ಗಾಂಧಿಯವರಿಗೆ ಎಂದಿಗೂ ಅಷ್ಟೇ ಗೌರವ ಇದೆ. ಕಾಂಗ್ರೆಸ್ಸಿನವರು ಚುನಾವಣೆ ಬಂದಾಗ ರಾಜಕೀಯವಾಗಿ ಗಾಂಧಿ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಗಾಂಧಿ ಹೆಸರಿನ ಲಾಭ ಪಡೆದವರು ಈಗಿನ ಗಾಂಧಿ ಕುಟುಂಬದವರು. ಅದೆಲ್ಲ ಹೋಗಿ ಬಿಡುತ್ತದೆ ಎಂಬ ಭಯ ಅವರಿಗೆ ಕಾಡುತ್ತಿದೆ ಎಂದು ಕುಟುಕಿದರು.

ಕಾಂಗ್ರೆಸ್‌ ರಾಜಕಾರಣಕ್ಕಾಗಿ ‘ವಿಬಿ– ಜಿ ರಾಮ್‌ ಜಿ’ ಗೆ ವಿರೋಧ ಮಾಡುತ್ತಿದೆ. ನರೇಗಾದಲ್ಲಿ ಬಹಳಷ್ಟು ಲೋಪಗಳಿದ್ದವು. ನಕಲಿ ಕಾರ್ಡ್‌ಗಳಿದ್ದವು. ಪಾರದರ್ಶಕತೆ ಇರಲಿಲ್ಲ. 125 ದಿನ ಕೂಲಿ ದಿನ ಮಾಡಿದ್ದೇವೆ. ಪಾರದರ್ಶಕತೆ ತಂದಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿ ಯೋಜನೆ ರೂಪಿಸಲು ಕಾಯ್ದೆ ಜಾರಿಗೆ ತಂದಿದ್ದೇವೆ. ₹33 ಸಾವಿರ ಕೋಟಿ ಕಾಂಗ್ರೆಸ್‌ ಪ್ರತಿ ವರ್ಷ ಖರ್ಚು ಮಾಡುತ್ತಿತ್ತು. ನರೇಂದ್ರ ಮೋದಿ ಬಂದ ನಂತರ ₹1.11 ಲಕ್ಷ ಖರ್ಚು ಮಾಡಲಾಗುತ್ತಿದೆ. ಮೂರು ಪಟ್ಟು ಹೆಚ್ಚಿಗೆ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಕಾಯ್ದೆಯಿಂದ ಆಸ್ತಿ ಸೃಷ್ಟಿಯಾಗಬೇಕು. ಇದಕ್ಕಾಗಿ ಹಲವಾರು ಹೊಸ ಬದಲಾವಣೆ ತಂದಿದ್ದೆವೆ. 100 ದಿನಗಳ ಕೂಲಿ ಹಣವನ್ನು ಸಂಪೂರ್ಣ ಕೇಂದ್ರ ಸರ್ಕಾರ ಕೊಡುತ್ತದೆ. ಹೆಚ್ಚುವರಿ 25 ದಿನಗಳದ್ದು ರಾಜ್ಯ ಸರ್ಕಾರ ಕೊಡಬೇಕೆಂದು ಬದಲಾವಣೆ ಮಾಡಲಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟು ಜನಸಾಮಾನ್ಯರಿಗೆ, ಬಡವರಿಗೆ ಕೂಲಿ ಕೊಡಲು ಹಿಂದೇಟು ಹಾಕುತ್ತಿದೆ. ಇವರು ಯಾರ ಪರವಾಗಿ ಇದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದರು.

ಹೈ ಇದೆ ಕಮಾಂಡ್‌ ಇಲ್ಲ:

ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ನಲ್ಲಿ ಹೈ ಇದೆ ಕಮಾಂಡ್‌ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದರು. ಎಲ್ಲ ಹೈಕಮಾಂಡ್‌ ಮಾಡಲಿದೆ ಅಂದಿದ್ದರು. ನಿನ್ನೆ ಕಲಬುರಗಿಯಲ್ಲಿ ಈ ಸಮಸ್ಯೆ ಇಲ್ಲೇ ಇದೆ. ನಮ್ಮಲ್ಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಹೈಕಮಾಂಡ್‌, ಹೈಕಮಾಂಡ್‌ ಆಗಿ ಉಳಿದಿಲ್ಲ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಬಗೆಹರಿಸುತ್ತಾರೆ ಎಂದು ಖರ್ಗೆ ಹೇಳಿದ್ದಾರೆ. ಹೈಕಮಾಂಡ್‌ ಎರಡು ಭಾಗವಾಗಿದೆ. ಇಷ್ಟು ದಿನ ರಾಜ್ಯದ ದುರ್ಲಾಭ ಪಡೆದಿದೆ. ಈಗ ಮೈಮೇಲೆ ಬಂದಾಗ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕುರ್ಚಿ ಕಿತ್ತಾಟದ ಪರಿಣಾಮ ರಾಜ್ಯದ ಅಭಿವೃದ್ಧಿ ಮೇಲೆ ಆಗುತ್ತಿದೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಪರಿಹಾರ ರೈತರಿಗೆ ಸರಿಯಾಗಿ ಸಿಗುತ್ತಿಲ್ಲ. ಮೆಕ್ಕೆಜೋಳ, ಕಬ್ಬು ಬೆಳೆಗಾರರಿಗೆ ಬೆಲೆ ಸಿಕ್ಕಿಲ್ಲ. ಸ್ಪಂದನೆ ದೊರೆತಿಲ್ಲ. ನೌಕರರು ಸೇರಿದಂತೆ ಎಲ್ಲಾ ವರ್ಗದವರು ಬಹಳ ನೊಂದಿದ್ದಾರೆ. ಸ್ಪಂದನೆ ಇಲ್ಲ. ತಾತ್ಕಾಲಿಕ ತೇಪೆ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ. 24 ತಾಸು ಕುರ್ಚಿ ಉಳಿಸಿಕೊಳ್ಳಲು, ಒಬ್ಬರು ಕಸಿದುಕೊಳ್ಳಲು ನಿರತರಾಗಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯನವರು ಮುಂದುವರಿಯುತ್ತಾರೋ ಅಥವಾ ಇಲ್ಲವೋ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಅದರ ಬಗ್ಗೆ ನಾನೇನೂ ಹೇಳಲಿ ಎಂದು ನಕ್ಕರು.

ಭಾರತದ ಅಪಮಾನ ರಾಹುಲ್‌ ಗಾಂಧಿ ಕಾಯಕ:

ಕಾಂಗ್ರೆಸ್‌ ಮಾಡಿರುವ ಪಾಪ, ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿದರೆ ಇವರಿಗೆ ಸಮಸ್ಯೆಯಾಗುತ್ತದೆ. ವಿದೇಶದಲ್ಲಿ ಹೋಗಿ ಭಾರತದ ಬಗ್ಗೆ, ಭಾರತದ ಸಂಸ್ಥೆಗಳ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ. ನಮ್ಮ ದೇಶದ ಅಪಮಾನ ಮಾಡುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಅಮೆರಿಕ, ಬ್ರೆಜಿಲ್‌, ಜರ್ಮನಿಯಲ್ಲಿ ಮಾಡಿದ್ದಾರೆ. ಭಾರತವನ್ನು ಟೀಕಿಸುವುದೇ ಅವರಿಗೆ ಕಾಯಕವಾಗಿದೆ. ಅವರಿಗೆ ಭಾರತದ ಮೇಲಿಲ್ಲ ಅಧಿಕಾರದ ಮೇಲೆ ಪ್ರೀತಿ ಇದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಹೆಸರು ಪ್ರಸ್ತಾಪಿಸದೇ ಜರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.