ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲಗಾರರಿಗೆ ಆಗುತ್ತಿದ್ದ ಕಿರುಕುಳ ತಪ್ಪಿಸುವ ಉದ್ದೇಶದಿಂದ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಕಾಯ್ದೆಯ ಬಲ ನೀಡುವ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಮಸೂದೆ 2025’ಕ್ಕೆ ವಿಧಾನಸಭೆ ಒಮ್ಮತದ ಅಂಗೀಕಾರ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಮಸೂದೆಯನ್ನು ಪರ್ಯಾಲೋಚನೆಗೆ ಮಂಡಿಸಿದರು.
ಈ ಕುರಿತು ವಿವರ ನೀಡಿದ ಪಾಟೀಲ, ಕೆಲವು ಕಿರು ಹಣಕಾಸು ಸಂಸ್ಥೆಗಳು ಸಾಲ ವಸೂಲಿಗೆ ಕಠಿಣ ಕ್ರಮಗಳನ್ನು ಅನುಸರಿಸಿದ್ದರಿಂದ ಜನ ಆತ್ಮವಿಶ್ವಾಸ ಕಳೆದುಕೊಂಡಿದ್ದರು. ಇದರ ಪರಿಣಾಮ 19 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ವಸೂಲಾತಿ ಸಂಸ್ಥೆಗಳ ಕಿರುಕುಳದಿಂದ ಚಾಮರಾಜನರ ಜಿಲ್ಲೆಯ ಗ್ರಾಮವೊಂದರ ಗ್ರಾಮಸ್ಥರು ಮನೆಗಳನ್ನು ಬಿಟ್ಟು ಹೋಗಿದ್ದರು. ಜನರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಕಠಿಣ ಕಾನೂನಿನ ಅಗತ್ಯವಿತ್ತು ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ನೋಂದಾಯಿತವಲ್ಲದ ಹಣಕಾಸು ಸಂಸ್ಥೆಗಳು, ಲೇವಾದೇವಿದಾರರು ಸುಮಾರು ₹40 ಸಾವಿರ ಕೋಟಿ ಸಾಲ ನೀಡಿದ್ದಾರೆ. ಕೆಲವು ಸಂಸ್ಥೆಗಳು ತಿಂಗಳಿಗೆ ಶೇ 10ರಷ್ಟು ಬಡ್ಡಿ ವಿಧಿಸುತ್ತಿವೆ. ಬಹುತೇಕ ಕಪ್ಪು ಹಣವೇ ಬಳಕೆ ಆಗುತ್ತಿತ್ತು. ಸಣ್ಣ ವ್ಯಾಪಾರಿಗಳಿಗೆ ದಿನಕ್ಕೆ ₹5,000 ಸಾಲ ನೀಡುವಾಗಲೇ ₹500 ಹಿಡಿದುಕೊಳ್ಳುತ್ತಾರೆ. ಸಂಜೆ ₹5,000 ವಾಪಸ್ ಮಾಡಬೇಕಾಗುತ್ತದೆ. ಕಿರುಕುಳ ನೀಡುವುದಕ್ಕೆ, ಬಡವರ ರಕ್ತ ಹೀರುವುದಕ್ಕೆ ಹೊಸ ಕಾಯ್ದೆಯಿಂದ ಕಡಿವಾಣ ಬೀಳಲಿದೆ ಎಂದು ಪಾಟೀಲ ತಿಳಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧಪಕ್ಷದ ನಾಯಕ ಆರ್.ಅಶೋಕ, ಸರ್ಕಾರ ಮಸೂದೆ ಮಂಡಿಸಿರುವುದು ರೈಲು ಹೋದ ಮೇಲೆ ಟಿಕೆಟ್ ಪಡೆದ ಹಾಗೆ ಆಗಿದೆ. ಸರ್ಕಾರ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಇದ್ದ ಕಾನೂನು ಬಳಸಿ ಕಿರುಕುಳ ನೀಡುತ್ತಿದ್ದವರನ್ನು ಶಿಕ್ಷೆಗೆ ಗುರಿಪಡಿಸಿದ್ದರೆ 30 ಜನರ ಪ್ರಾಣ ಉಳಿಸಬಹುದಿತ್ತು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ.ಪಾಟೀಲ, ಹೊಸ ಮಸೂದೆಯಲ್ಲಿ ದಂಡ ಮತ್ತು ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಹಿಂದೆ ದಂಡ ₹1,000ದಿಂದ ₹10 ಸಾವಿರ ಮತ್ತು 6 ತಿಂಗಳವರೆಗೆ ಶಿಕ್ಷೆ ಇತ್ತು. ಈಗ ದಂಡವನ್ನು ₹5 ಲಕ್ಷ ಮತ್ತು ಜೈಲು ಶಿಕ್ಷೆ 10 ವರ್ಷದವರೆಗೆ ಹೆಚ್ಚಿಸಲಾಗಿದೆ ಎಂದರು.
ಚರ್ಚೆಯಲ್ಲಿ ಜೆಡಿಎಸ್‌ನ ಎಚ್.ಟಿ.ಕೃಷ್ಣಪ್ಪ, ಕಾಂಗ್ರೆಸ್‌ನ ಲಕ್ಷ್ಮಣ ಸವದಿ ಅವರೂ ಭಾಗವಹಿಸಿದ್ದರು.
ಇದೇ ವೇಳೆ, ಕರ್ನಾಟಕ ಗಿರವಿದಾರರ (ತಿದ್ದುಪಡಿ) ಅಧಿನಿಯಮ 2025, ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ (ತಿದ್ದುಪಡಿ) ಮಸೂದೆ 2025 ಮತ್ತು ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಮಸೂದೆಯನ್ನೂ ಅಂಗೀಕರಿಸಲಾಯಿತು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಪರ್ಯಾಲೋಚನೆಗೆ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.