ADVERTISEMENT

ಮಧ್ಯಾಹ್ನದ ಬಿಸಿಯೂಟ ಕೃಷ್ಣ ಸರ್ಕಾರದ ಯೋಜನೆ: ಪ್ರೊ.ಬಿಕೆಸಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:00 IST
Last Updated 28 ಜೂನ್ 2021, 21:00 IST
ಪ್ರೊ. ಬಿ.ಕೆ. ಚಂದ್ರಶೇಖರ್
ಪ್ರೊ. ಬಿ.ಕೆ. ಚಂದ್ರಶೇಖರ್   

ಬೆಂಗಳೂರು: ‘ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಎಸ್‌.ಎಂ. ಕೃಷ್ಣ ನೇತೃತ್ವದ ಸರ್ಕಾರದ (2003) ಹಾಗೂ ನಾನು ಪ್ರಾಥಮಿಕ ಶಿಕ್ಷಣ ಸಚಿವನಾಗಿದ್ದ ಕಾಲದ ಕಾರ್ಯಕ್ರಮ’ ಎಂದು ಕೆಪಿಸಿಸಿ ವಕ್ತಾರ ಪ್ರೊ. ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.

‘ಈ ಯೋಜನೆಗೆ ಸಂಬಂಧಿಸಿದಂತೆ, ಕಾಕತಾಳೀಯವೆಂಬಂತೆ ನಾನೂ ತಮಿಳುನಾಡಿಗೆ ತೆರಳಿ, ಅಲ್ಲಿ ಎಂಜಿಆರ್‌ ಸರ್ಕಾರ ಆರಂಭಿಸಿದ್ದ ಈ ಯೋಜನೆಯ ಪ್ರತಿಯೊಂದು ಆಯಾಮವನ್ನು ಚರ್ಚಿಸಿದ್ದೆ. ಈ ಯೋಜನೆಯನ್ನು ಸುತ್ತೂರು ಶ್ರೀಗಳ ಸಹಯೋಗದಲ್ಲಿ ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಸೋನಿಯಾ ಗಾಂಧಿ ಉದ್ಘಾಟಿಸಿದ್ದರು’ ಎಂದಿದ್ದಾರೆ.

‘ಆದರೆ, ಜೂನ್‌ 27ರ ‘ಪ್ರಜಾವಾಣಿ’ಯಲ್ಲಿ (ಪುಟ 3ಸಿ) ಪ್ರಕಟವಾಗಿದ್ದ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆ ಬಳಿಕ ಕೆಲವು ಶಾಲಾ ಶಿಕ್ಷಕರು ಕರೆ ಮಾಡಿ ಈ ಬಗ್ಗೆ ಪ್ರಶ್ನಿಸಿದ್ದರಿಂದ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಯಾವುದೇ ದೃಷ್ಟಿಯಲ್ಲೂ ಇಬ್ರಾಹಿಂ ಅವರನ್ನು ಪ್ರಶ್ನಿಸುವ ಪ್ರಯತ್ನವಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಕುರಿತು ಅವರು ಹೇಳಿಕೆ ನೀಡುವ ಸಂದರ್ಭದಲ್ಲಿ, ‘ಒಂದು ರೂಗೆ ಒಂದು ಕಿಲೋ ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ತಮಿಳುನಾಡಿನಲ್ಲಿ ಎರಡು ದಿನ ಕುಳಿತು ಅಧ್ಯಯನ ಮಾಡಿ ನಾನು ಆ ಯೋಜನೆ ತಂದೆ. ಅದು ಯಶಸ್ವಿ ಆಯಿತು. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯೋಜನೆಕೊಟ್ಟೆ‘ ಎಂದಿದ್ದರು.

ಬಹುಶಃ ಇಬ್ರಾಹಿಂ ಅವರ ಮನಸ್ಸಿನಲ್ಲಿದ್ದದ್ದು‘ಅನ್ನಭಾಗ್ಯ’ ಯೋಜನೆ ಇರಬಹುದು. ‘ಮಧ್ಯಾಹ್ನದ ಊಟ’ದ ಬಗ್ಗೆ ಶಿಕ್ಷಕರಲ್ಲಿ ಗೊಂದಲವಾದಂತಿದೆ’ ಎಂದು ಚಂದ್ರಶೇಖರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.