
ಬೆಂಗಳೂರು: ‘ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೆ ಪೂರೈಕೆಯಾಗುತ್ತಿರುವ ತೊಗರಿ ಬೇಳೆಯ ಗುಣಮಟ್ಟ ಪರಿಶೀಲಿಸಲಾಗುವುದು. ಕಳಪೆ ಬೇಳೆ ಪೂರೈಸುತ್ತಿರುವುದು ಕಂಡುಬಂದರೆ ಸಂಬಂಧ ಪಟ್ಟ ಅಧಿಕಾರಿ, ಟೆಂಡರ್‌ದಾರರು ಮತ್ತು ಪೂರೈಕೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಬಿ. ಸುರೇಶ್ ಗೌಡ ವಿಷಯ ಪ್ರಸ್ತಾಪಿಸಿದಾಗ ಉತ್ತರಿಸಿದ ಸಚಿವರು, ‘ಇಡೀ ರಾಜ್ಯದಲ್ಲಿ ಬಿಸಿಯೂಟಕ್ಕೆ ಪೂರೈಕೆಯಾಗುತ್ತಿರುವ ತೊಗರಿ ಬೇಳೆಯ ಗುಣಮಟ್ಟ ಕಳಪೆಯಾಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ’ ಎಂದರು.
‘ಬಿಸಿಯೂಟಕ್ಕೆ ನಿಯಮಾನುಸಾರ ಗುಣಮಟ್ಟದ ದಿನಸಿ ಪೂರೈಕೆ ಆಗುತ್ತಿಲ್ಲ. ಗುಣಮಟ್ಟ ಪರೀಕ್ಷೆಯನ್ನೂ ನಡೆಸುತ್ತಿಲ್ಲ. ನನ್ನ ಕ್ಷೇತ್ರದ ಕೆಪಿಎಸ್ ಶಾಲೆಯೊಂದಕ್ಕೆ ಹುಳ ಬಿದ್ದಿರುವ ತೊಗರಿ ಬೇಳೆ ಪೂರೈಕೆಯಾಗಿದೆ. ಹಂದಿಗಳು ತಿನ್ನಲು ಕೂಡಾ ಯೋಗ್ಯವಲ್ಲದ ಬೇಳೆ ಪೂರೈಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ತೊಗರಿ ಬೇಳೆಗೆ ₹ 95ಕ್ಕಿಂತ ಹೆಚ್ಚು ದರ ಇದೆ. ಆದರೆ, ಬಿಸಿಯೂಟಕ್ಕೆ ಟೆಂಡರ್‌ದಾರರು ₹65ಕ್ಕೂ ಕಡಿಮೆ ದರದಲ್ಲಿ ಬಿಡ್ ಮಾಡಿ ಸರಬರಾಜು ಮಾಡುತ್ತಿದ್ದಾರೆ. ಈ ರೀತಿ ನಷ್ಟ ಮಾಡಿಕೊಂಡು ಹೇಗೆ ಗುಣಮಟ್ಟದ ಬೇಳೆ ಪೂರೈಸಲು ಸಾಧ್ಯ. ಇದರಲ್ಲಿ ದೊಡ್ಡ ಹಗರಣ ನಡೆಯುತ್ತಿದ್ದು, ತನಿಖೆ ಆಗಬೇಕು’ ಎಂದು ಸುರೇಶ್‌ಗೌಡ ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿ. ಸುನಿಲ್ ಕುಮಾರ್, ಶರಣು ಸಲಗರ ಸೇರಿದಂತೆ ಬಿಜೆಪಿಯ ಸದಸ್ಯರು ದನಿಗೂಡಿಸಿ, ‘ದಿನಸಿ ಪೂರೈಕೆದಾರರು ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ವರ್ಷಕ್ಕೆ 50 ಕ್ವಿಂಟಲ್ ದಿನಸಿ ಅಗತ್ಯವಿರುವ ಶಾಲೆಗೆ 1 ಕ್ವಿಂಟಲ್ ಅಗತ್ಯ ತೋರಿಸಿ ಟೆಂಡರ್ ಪಡೆಯುತ್ತಿದ್ದಾರೆ. ಬಡ ಮಕ್ಕಳ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.