ADVERTISEMENT

ಅಕ್ಷರ ದಾಸೋಹ l ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ ಶುರು

6 ಸಾವಿರಕ್ಕೂ ಹೆಚ್ಚು ನೌಕರರ ವಜಾಕ್ಕೆ ಆಕ್ರೋಶ l ₹1 ಲಕ್ಷ ಇಡುಗಂಟಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:41 IST
Last Updated 16 ಆಗಸ್ಟ್ 2022, 21:41 IST
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಮಹಿಳೆಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಮಹಿಳೆಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿಸಿಯೂಟ ತಯಾರಿಸುವ 6 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು 60 ವರ್ಷ ವಯೋಮಿತಿ ನೆಪವೊಡ್ಡಿ ಏಕಾಏಕಿ ಕೆಲಸದಿಂದ ಬಿಡುಗಡೆ ಮಾಡಲಾಗಿದ್ದು, ಇವರಿಗೆ ನಿವೃತ್ತಿ ವೇತನ ಹಾಗೂ₹ 1 ಲಕ್ಷ ಇಡುಗಂಟು ನೀಡಬೇಕು’ ಎಂದು ಒತ್ತಾಯಿಸಿ ಮಹಿಳೆಯರು ನಗರದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಮಂಗಳವಾರ ನಗರಕ್ಕೆ ಬಂದ ಮಹಿಳೆಯರು, ಸಿಐಟಿಯು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಕುಳಿತಿದ್ದಾರೆ. ಅಹೋರಾತ್ರಿಯೂ ಪ್ರತಿಭಟನೆ ಮುಂದುವರಿಯಿತು.

‘ಮಹಿಳೆಯರನ್ನು ಕೆಲಸದಿಂದ ಏಕಾಏಕಿ ಬಿಡುಗಡೆ ಮಾಡಿರುವುದನ್ನು ರದ್ದುಪಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಮುಖಂಡರ ನಿಯೋಗದ ಜೊತೆ ಮಾತುಕತೆ ನಡೆಸಿದ್ದ ಸರ್ಕಾರದ ಅಧಿಕಾರಿಗಳು, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಬೇಡಿಕೆ ಈಡೇರಿಲ್ಲ. ಹೀಗಾಗಿ, ಪುನಃ ಧರಣಿ ಆರಂಭಿಸಿದ್ದೇವೆ’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ADVERTISEMENT

‘ಮಹಿಳೆಯರನ್ನು ಕೆಲಸದಿಂದ ಬಿಡುಗಡೆ ಮಾಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಅವರ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ. ಸದ್ಯ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಆತಂಕ ಶುರುವಾಗಿದ್ದು, ಸೇವಾ ಭದ್ರತೆಯೇ ಇಲ್ಲದಂತಾಗಿದೆ. ಬಿಡುಗಡೆ ಮಾಡಿರುವ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡುವವರೆಗೂ ಹಾಗೂ ಇತರೆ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದೂ ಪಟ್ಟು ಹಿಡಿದಿದ್ದಾರೆ.

‘ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿರುವ ಮಹಿಳೆಯರು, ಶಿಕ್ಷಣದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದ್ದಾರೆ. ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಬಜೆಟ್‌ನಲ್ಲಿ ಹೆಚ್ಚಳ ಮಾಡಿರುವ ₹ 1,000 ವೇತನವನ್ನು 2022ರ ಜನವರಿಯಿಂದ ಅನ್ವಯಗೊಳಿಸಬೇಕು. ಬಿಸಿಯೂಟ ಯೋಜನೆ ಕಾಯಂಗೊಳಿಸಬೇಕು. ಅಲ್ಲಿಯವರೆಗೂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ವೇತನ ನೀಡಬೇಕು. ಪ್ರತಿ ಶಾಲೆಗೆ ಇಬ್ಬರು ಅಡುಗೆಯವರನ್ನು ನಿಯೋಜಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು’ ಎಂದೂ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.