ADVERTISEMENT

ಲಖನೌ ಕಡೆ ಹೊರಟ 2,399 ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:33 IST
Last Updated 9 ಮೇ 2020, 19:33 IST
ಲಖನೌಗೆ ಹೊರಟ ಕಾರ್ಮಿಕರು
ಲಖನೌಗೆ ಹೊರಟ ಕಾರ್ಮಿಕರು   

ಹೆಸರಘಟ್ಟ: ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸುವುದಕ್ಕಾಗಿ ಆರಂಭಿಸಲಾಗಿರುವ ಶ್ರಮಿಕ ರೈಲು ಸಂಚಾರ ಮುಂದುವರಿದಿದ್ದು, ಶನಿವಾರವೂ 2,399 ಕಾರ್ಮಿಕರನ್ನು ಲಖನೌಗೆ ಕಳುಹಿಸಲಾಯಿತು.

ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಿಂದ ಎರಡು ರೈಲಿನಲ್ಲಿ ಕಾರ್ಮಿಕರು ತಮ್ಮೂರಿನತ್ತ ಪ್ರಯಾಣ ಬೆಳೆಸಿದರು.

ನಗರದ ಮಡಿವಾಳ, ಸರ್ಜಾಪುರ, ಕೆ.ಆರ್. ಪುರ ಪ್ರದೇಶಗಳಿದ್ದ ಕಾರ್ಮಿಕರನ್ನು 82 ಬಿಎಂಟಿಸಿ ಬಸ್‌ಗಳ ಮೂಲಕ ರೈಲ್ವೆ ನಿಲ್ದಾಣಕ್ಕೆ ಕರೆತರಲಾಗಿತ್ತು. ಅವರೆಲ್ಲರೂ ಅಂತರ ಕಾಯ್ದುಕೊಂಡು ನಿಲ್ದಾಣದೊಳಗೆ ಪ್ರವೇಶಿಸಿ ರೈಲು ಹತ್ತಿದರು. ಪ್ರವೇಶ ದ್ವಾರದಲ್ಲೇ ಅವರ ಆರೋಗ್ಯ ತಪಾಸಣೆಯನ್ನೂ ನಡೆಸಲಾಯಿತು.

ADVERTISEMENT

ಪಾತ್ರೆಗಳು, ಗೃಹೋಪಯೋಗಿ ವಸ್ತುಗಳು, ಬಟ್ಟೆ ಹಾಗೂ ಇತರೆ ಲಗೇಜುಗಳ ಸಮೇತವೇ ಕಾರ್ಮಿಕರು ನಿಲ್ದಾಣಕ್ಕೆ ಬಂದಿದ್ದರು. ಕೆಲವರು ತಲೆ ಮೇಲೆ ಲಗೇಜು ಹೊತ್ತುಕೊಂಡು ಸಾಗಿರು. ಕೆಲವರು, ಹವಾನಿಯಂತ್ರಿತ ಉಪಕರಣ, ಬಟ್ಟೆ ತೊಳೆಯುವ ಯಂತ್ರ, ಹೊಲಿಗೆ ಯಂತ್ರವನ್ನೂ ತಮ್ಮೊಂದಿಗೆ ತಂದಿದ್ದರು.

ಬಹುತೇಕ ಕಾರ್ಮಿಕರು ಇಟ್ಟಿಗೆ ತಯಾರಿಕೆ ಘಟಕ, ಹೋಟೆಲ್, ಅರ್ಪಾಟ್‍ಮೆಂಟ್‍ ಸಮುಚ್ಚಯಗಳಲ್ಲಿ ಕೆಲಸ ಮಾಡುತ್ತಿದ್ದರು.

ಭವಿಷ್ಯ ನಿಧಿಯದ್ದೇ ಚಿಂತೆ; ನಿಲ್ದಾಣದಲ್ಲಿ ಮಾತನಾಡಿದ ಕಾರ್ಮಿಕ ದಾವ್‌ಜೀ ಬೋರಾ, ‘ಐದು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೆ. ಸುಮಾರು ಇಪ್ಪತ್ತು ಸಾವಿರ ಭವಿಷ್ಯ ನಿಧಿ (ಪಿ.ಎಫ್) ಹಣ ಬರಬೇಕಿತ್ತು. ಹಣ ನೀಡುವಂತೆ ಅರ್ಜಿಯನ್ನೂ ಸಲ್ಲಿಸಿದ್ದೆ. ಆದರೆ, ಇದುವರೆಗೂ ಹಣ ಬಂದಿಲ್ಲ. ಅದರದ್ದೇ ಚಿಂತೆಯಾಗಿದೆ’ ಎಂದರು.

ಊರಿಗೆ ಕಳುಹಿಸಲು ಪಟ್ಟು

ಸಿ.ವಿ.ರಾಮನ್ ನಗರದ ಕಟ್ಟಡ ಕಾಮಗಾರಿ ಸ್ಥಳವೊಂದರಲ್ಲಿ ಉಳಿದುಕೊಂಡಿರುವ ಕಾರ್ಮಿಕರು, ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ‘ಲಾಕ್‌ಡೌನ್‌ ಆದಾಗಿನಿಂದ ನಾವೆಲ್ಲರೂ ಆತಂಕಗೊಂಡಿದ್ದೇವೆ. ಯಾವಾಗ ಏನಾಗುತ್ತದೆ ಎಂಬ ಭಯವಿದೆ. ನಮ್ಮ ಕುಟುಂಬದವರನ್ನು ನೋಡಬೇಕು. ಈ ಕೂಡಲೇ ನಮ್ಮೂರಿಗೆ ಕಳುಹಿಸಿಕೊಡಿ’ ಎಂದು ಒತ್ತಾಯಿಸಿದರು. ‌ ಸ್ಥಳಕ್ಕೆ ಬಂದ ಪೊಲೀಸರು, ನೋಂದಣಿ ಮಾಡಿಕೊಂಡ ಕಾರ್ಮಿಕರನ್ನು ಹಂತ ಹಂತವಾಗಿ ರೈಲಿನ ಮೂಲಕ ಕಳುಹಿಸುವುದಾಗಿ ಹೇಳಿದರು. ಎಲ್ಲರನ್ನೂ ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಗಾರ್ಮೆಂಟ್ಸ್ ಉದ್ಯೋಗಿಗಳ ಪ್ರತಿಭಟನೆ

ಪೀಣ್ಯ ಎನ್‌ಟಿಟಿಎಫ್‌ ಬಳಿ ಇರುವ ‘ಗಾರ್ಡನ್ ಸಿಟಿ’ ಗಾರ್ಮೆಂಟ್ಸ್ ಕಾರ್ಖಾನೆ ಬಂದ್ ಆಗುವ ಸುದ್ದಿ ಹರಡಿದ್ದರಿಂದ ಆತಂಕಗೊಂಡ ಉದ್ಯೋಗಿಗಳು ಕಾರ್ಖಾನೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

‘ಲಾಕ್‌ಡೌನ್‌ನಿಂದಾಗಿ ತಾತ್ಕಾಲಿಕವಾಗಿ ಬಂದ್ ಆಗಿರುವ ಕಾರ್ಖಾನೆ ಇದುವರೆಗೂ ಪುನಃ ಆರಂಭವಾಗಿಲ್ಲ. ಕಾರ್ಖಾನೆಯನ್ನೇ ಬಂದ್ ಮಾಡುವುದಾಗಿ ಮಾಲೀಕರು ಹೇಳುತ್ತಿದ್ದಾರೆ. 800ಕ್ಕೂ ಹೆಚ್ಚು ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಕಾರ್ಖಾನೆಯೂ ಲಾಭದಲ್ಲಿದೆ. ಇಂಥ ಕಾರ್ಖಾನೆ ಬಂದ್ ಮಾಡಿದರೆ ನಾವೆಲ್ಲರೂ ಬೀದಿ ಪಾಲಾಗುತ್ತೇವೆ’ ಎಂದು ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಮುಖಂಡರು, ‘ಪ್ರತಿಭಟನೆ ಕೈಬಿಟ್ಟು ಉದ್ಯೋಗಿಗಳು ಮನೆಗೆ ಹೋಗಬೇಕು. ಲಾಕ್‌ಡೌನ್ ಮುಗಿದ ನಂತರ ವಿಚಾರಿಸೋಣ’ ಎಂದರು. ಅದಕ್ಕೆ ಒಪ್ಪಿ ಉದ್ಯೋಗಿಗಳು ಪ್ರತಿಭಟನೆ ಕೈಬಿಟ್ಟರು.

***

ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿರುವ ವಲಸೆ ಕಾರ್ಮಿಕರು, ನಿರ್ಬಂಧ ಮುಗಿವವರೆಗೂ ಅಲ್ಲೇ ಉಳಿಯಬೇಕಾಗುತ್ತದೆ. ಆರೋಗ್ಯ ತಪಾಸಣೆ ಬಳಿಕವಷ್ಟೇ ಅವರನ್ನು ಊರಿಗೆ ಕಳುಹಿಸಲು ಕ್ರಮ ಕೈಗೊಳ್ಳುತ್ತೇವೆ

- ಎನ್‌.ಮಂಜುನಾಥ ಪ್ರಸಾದ್‌, ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಹೊಣೆ ಹೊತ್ತ ಐಎಎಸ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.