ಬೆಳಗಾವಿ: ‘ಒಕ್ಕೂಟಕ್ಕೆ ಹಾಲು ಪೂರೈಸುವ ರೈತರಿಗೆ ಕೊಡುತ್ತಿರುವ ಪ್ರೋತ್ಸಾಹಧನವನ್ನು ₹5ರಿಂದ ₹6ಕ್ಕೆ (ಲೀಟರ್‌ಗೆ) ಹೆಚ್ಚಿಸಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಕ್ಷೀರಭಾಗ್ಯ’ ಯೋಜನೆಯಲ್ಲಿ ಶಾಲಾ ಮಕ್ಕಳಿಗೆ ಪ್ರಸ್ತುತ ಹಾಲಿನ ಪುಡಿ ಒದಗಿಸುತ್ತಿದ್ದೇವೆ. ಆದರೆ, ಶಿಕ್ಷಣ ಇಲಾಖೆಯ ಕೆಲವರು ಪುಡಿಯನ್ನು ಮಾರಿಕೊಳ್ಳುತ್ತಿರುವ ದೂರುಗಳಿವೆ. ಇದನ್ನು ತಡೆಯಲು ಮತ್ತು ಮಕ್ಕಳಿಗೆ ಹಾಲು ಸಿಗುವಂತೆ ನೋಡಿಕೊಳ್ಳಲು 200 ಮಿ.ಲೀ. ಹಾಲನ್ನು ಫ್ಲೆಕ್ಸಿ ಪ್ಯಾಕ್‌ಗಳಲ್ಲಿ ಪೂರೈಕೆಗೆ ಯೋಜಿಸಲಾಗಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಹಾಲು ದೊರೆಯಲಿದೆ. ಬೆಳಗಾವಿ, ತುಮಕೂರು ಹಾಗೂ ಮಂಗಳೂರು ಘಟಕಗಳಲ್ಲಿ ಪ್ಯಾಕ್‌ಗಳನ್ನು ಸಿದ್ಧಪಡಿಸಲು ಅವಕಾಶವಿದೆ’ ಎಂದು ಹೇಳಿದರು.
‘ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಿಸದಿರುವುದು ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದ ರೈತರಿಗೆ ಪ್ರೋತ್ಸಾಹಧನ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಆಯಾ ತಿಂಗಳಲ್ಲೇ ಕೊಡಲಾಗುವುದು’ ಎಂದರು.
‘ಹೈನುಗಾರಿಕೆಗೆ ಧಕ್ಕೆ ತರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತರೆಲ್ಲರೂ ಅಭಿನಂದಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.