ADVERTISEMENT

ಕನಿಷ್ಠ ಮೊತ್ತ ಇಳಿಕೆ: ಮೃಗಾಲಯಗಳಿಗೆ ಹೆಚ್ಚು ಜನರಿಂದ ದೇಣಿಗೆ

ಮೃಗಾಲಯಗಳಿಗೆ ಆರು ದಿನಗಳಲ್ಲೇ ₹1 ಕೋಟಿಗೂ ಹೆಚ್ಚು ನೆರವು; 3,881 ಮಂದಿಯಿಂದ ಸಹಾಯ ಹಸ್ತ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಜೂನ್ 2021, 22:16 IST
Last Updated 11 ಜೂನ್ 2021, 22:16 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ (ಹಂಪಿ ಮೃಗಾಲಯ)
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ (ಹಂಪಿ ಮೃಗಾಲಯ)   

ಹೊಸಪೇಟೆ (ವಿಜಯನಗರ): ರಾಜ್ಯದ ಮೃಗಾಲಯಗಳಿಗೆ ನೆರವು ನೀಡಲು ಇದ್ದ ಕನಿಷ್ಠ ಮೊತ್ತದ ಮಿತಿ ಇಳಿಸಿರುವುದರಿಂದ ಈ ವರ್ಷ ಹೆಚ್ಚಿನವರು ದೇಣಿಗೆ ನೀಡಿದ್ದಾರೆ.

ಈ ಹಿಂದೆ ಕನಿಷ್ಠ ₹1,000, ಗರಿಷ್ಠ ₹1.75 ಲಕ್ಷದವರೆಗೆ ನೆರವು ನೀಡಬಹುದಿತ್ತು. ಈ ಎರಡನ್ನೂ ಪರಿಷ್ಕರಿಸಿ, ಕನಿಷ್ಠ ₹50
ರಿಂದ ಗರಿಷ್ಠ ₹2 ಲಕ್ಷದ ವರೆಗೆ ನೆರವು ನೀಡಲು ಅವಕಾಶ ಕಲ್ಪಿಸಿರುವುದರಿಂದ ನಿರೀಕ್ಷೆಗೂ ಮೀರಿದ ಬೆಂಬಲ ದೊರೆತಿದೆ.

‘ಅನೇಕರಿಗೆ ಪ್ರಾಣಿ, ಪಕ್ಷಿ ಕಂಡರೆ ಇಷ್ಟ. ಅವರಿಗೂ ಕೈಲಾದ ನೆರವು ನೀಡಬೇಕೆಂಬ ಮಹದಾಸೆ ಇರುತ್ತದೆ. ಆದರೆ, ಹೆಚ್ಚು ಹಣ ನೀಡಲು ಆಗುವುದಿಲ್ಲ. ಅಂತಹವರಿಗೂ ಸಾಧ್ಯವಾಗಲಿ ಎಂದು ದರ ಪರಿಷ್ಕರಿಸಲಾಗಿದೆ. ಪ್ರತಿಯೊಬ್ಬರೂ ಆನ್‌ಲೈನ್‌ನಲ್ಲೇ ನೆರವು ನೀಡಿ, ಅಲ್ಲಿಂದಲೇ ರಸೀದಿ, ತೆರಿಗೆ ವಿನಾಯಿತಿ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ತಿಳಿಸಿದ್ದಾರೆ.

ADVERTISEMENT

‘ದೇವಸ್ಥಾನಗಳ ಹುಂಡಿಯಲ್ಲಿ ಯಾರು, ಎಷ್ಟು ಬೇಕಾದರೂ ದೇಣಿಗೆ ಹಾಕುವ ವ್ಯವಸ್ಥೆ ಇದೆ. ಅದೇ ರೀತಿಯಲ್ಲಿ ಮೃಗಾಲಯಗಳಲ್ಲೂ ಈ ವ್ಯವಸ್ಥೆ ಕಲ್ಪಿಸಲಾಗಿದೆ.ಆದರೆ ಕನಿಷ್ಠ ₹50 ದೇಣಿಗೆ ನಿಗದಿಗೊಳಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

₹1 ಕೋಟಿಗೂ ಅಧಿಕ ನೆರವು: ಕೋವಿಡ್‌ ಸಂಕಷ್ಟದಲ್ಲಿ ರಾಜ್ಯದ ಒಂಬತ್ತು ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆದು ನೆರವಿಗೆ ಬರಬೇಕೆಂದು ವಿಶ್ವ ಪರಿಸರದ ದಿನದಂದು(ಜೂ.5ರಂದು) ನಟ ದರ್ಶನ್‌ ಮನವಿ ಮಾಡಿಕೊಂಡ ಆರು ದಿನಗಳಲ್ಲೇ ₹1 ಕೋಟಿಗೂ ಅಧಿಕ ಮೊತ್ತದ ನೆರವು ಹರಿದು ಬಂದಿದೆ.

ರಾಜ್ಯ ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿಯೂ ಆಗಿರುವ ದರ್ಶನ್‌ ಅವರ ಮನವಿಗೆ ಓಗೊಟ್ಟು ರಾಜ್ಯದ ವಿವಿಧ ಭಾಗಗಳ 3,881 ಜನರು ಸ್ಪಂದಿಸಿದ್ದಾರೆ. ಈ ಪೈಕಿ ಕೆಲವರು ಪ್ರಾಣಿಗಳನ್ನು ದತ್ತು ತೆಗೆದುಕೊಂಡರೆ, ಕೆಲವರು ಮೃಗಾಲಯಗಳ ನಿರ್ವಹಣೆಗೆ ದೇಣಿಗೆ ನೀಡಿದ್ದಾರೆ. ಹಲವರು ಕರೆ ಮಾಡಿ, ನೆರವಿನ ಭರವಸೆ ಕೂಡ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ಹರಿದು ಬರುವ ನಿರೀಕ್ಷೆಯಲ್ಲಿ ಪ್ರಾಧಿಕಾರ ಇದೆ.

ಮೈಸೂರು ಮೃಗಾಲಯಕ್ಕೆ 2,023 ಜನ ದೇಣಿಗೆ ನೀಡಿದ್ದು, ಒಟ್ಟು ₹51.75 ಲಕ್ಷ ಸಂಗ್ರಹವಾಗಿದೆ. ಬನ್ನೇರುಘಟ್ಟಕ್ಕೆ ₹29.83 ಲಕ್ಷ ನೆರವು ಸಿಕ್ಕಿದ್ದು, 918 ಜನ ದೇಣಿಗೆ ಕೊಟ್ಟಿದ್ದಾರೆ. ಶಿವಮೊಗ್ಗ ಮೃಗಾಲಯಕ್ಕೆ ₹7.24 ಲಕ್ಷ ನೆರವು ಹರಿದು ಬಂದಿದ್ದು, 146 ಜನ ದೇಣಿಗೆ ನೀಡಿದ್ದಾರೆ. ಗದಗ, ಹಂಪಿ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಕಲಬುರ್ಗಿ ನಂತರದ ಸ್ಥಾನದಲ್ಲಿವೆ. ನಟರಾದ ಉಪೇಂದ್ರ, ಸೃಜನ್‌ ಲೋಕೇಶ್‌, ಚಿಕ್ಕಣ್ಣ, ಶೈಲಜಾ ನಾಗ, ದೇವರಾಜ ಪ್ರಾಣಿಗಳನ್ನು ದತ್ತು ಪಡೆದವರಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.