ADVERTISEMENT

ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ: ಶೀರ್ಘ ನಿರ್ಧಾರ ಎಂದ ಸಂತೋಷ್‌ ಲಾಡ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 14:34 IST
Last Updated 8 ಡಿಸೆಂಬರ್ 2025, 14:34 IST
<div class="paragraphs"><p>ಸಂತೋಷ್‌ ಲಾಡ್‌</p></div>

ಸಂತೋಷ್‌ ಲಾಡ್‌

   

ಸುವರ್ಣ ವಿಧಾನಸೌಧ (ಬೆಳಗಾವಿ): ಕಂಪನಿಗಳ ಮಾಲೀಕರು, ಕಾರ್ಮಿಕ ಮುಖಂಡರ ಜತೆ ಚರ್ಚಿಸಿದ ನಂತರ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ವಿಧಾನಪರಿಷತ್‌ನ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಐವನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಮತ್ತೊಂದು ಸುತ್ತಿನ ಚರ್ಚೆ ನಡೆಸಿ, ಜನವರಿ ಅಂತ್ಯದ ಒಳಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು’ ಎಂದರು.

ADVERTISEMENT

ರಾಜ್ಯದ ಕರಾವಳಿ ಪ್ರದೇಶದಲ್ಲಿ ಬೀಡಿ ಕೆಲಸವನ್ನು ನಂಬಿಕೊಂಡು ಲಕ್ಷಾಂತರ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ, ಕನಿಷ್ಠ ₹150 ಕೂಲಿ ಸಿಗದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. 2018ರಲ್ಲಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿತ್ತು. ಸಾವಿರ ಬೀಡಿಗೆ ₹210 ಹಾಗೂ ಗ್ರಾಹಕ ಬೆಲೆ ಏರಿಕೆ ಸೂಚ್ಯಂಕದ ಪಾಯಿಂಟ್‌ಗೆ 0.04 ಪೈಸೆಯಂತೆ ತುಟ್ಟಿಭತ್ಯೆ ನಿಗದಿ ಮಾಡಲಾಗಿತ್ತು. ಈ ತೀರ್ಮಾನಕ್ಕೆ ಬೀಡಿ ಕಂಪನಿಗಳ ಮಾಲೀಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು.

ನಂತರ 2025ರ ಫೆಬ್ರುವರಿಯಲ್ಲಿ ಸರ್ಕಾರ ಕನಿಷ್ಠ ಕೂಲಿ ಅಧಿಸೂಚನೆ ಹೊರಡಿಸಿದೆ. ಅದರಂತೆ 2024ರ ಏಪ್ರಿಲ್‌ 1ರಿಂದ ಸಾವಿರ ಬೀಡಿಗೆ ₹270 ಕನಿಷ್ಠ ಕೂಲಿ, ಗ್ರಾಹಕ ಬೆಲೆ ಏರಿಕೆ ಸೂಚ್ಯಂಕ ಪಾಯಿಂಟ್‌ 0.03 ಪೈಸೆಯಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಸಾವಿರ ಬೀಡಿಗೆ ₹301.92 ಕನಿಷ್ಠ ವೇತನ ಪಾವತಿ ಮಾಡಬೇಕಿತ್ತು. ಆದರೆ, ಬೀಡಿ ಕಂಪನಿಗಳ ಮಾಲೀಕರು ₹284ರಿಂದ ₹288 ಪಾವತಿ ಮಾಡುತ್ತಿದ್ದಾರೆ. ಕನಿಷ್ಠ ವೇತನ ₹301.92 ನೀಡಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.