ಚಿತ್ರದುರ್ಗ: ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಜೋಗಿಮಟ್ಟಿ ವನ್ಯಧಾಮದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು 10 ಕಿ.ಮೀ.ನಿಂದ ಒಂದು ಕಿ.ಮೀ.ಗೆ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವ ಸರ್ಕಾರದ ಪರಿಶೀಲನಾ ಹಂತದಲ್ಲಿದೆ.
ಜೋಗಿಮಟ್ಟಿ ವನ್ಯಧಾಮದ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಗುರುತಿಸುವಂತೆ ಸುಪ್ರೀಂ ಕೋರ್ಟ್ 2018ರಲ್ಲಿ ಸರ್ಕಾರಕ್ಕೆ ಸೂಚಿಸಿತ್ತು. 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿಯಾಗುವ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವಂತೆಯೂ ತಾಕೀತು ಮಾಡಿತ್ತು. ಆರು ತಿಂಗಳು ಇದನ್ನು ಪಾಲಿಸಿದ ಸರ್ಕಾರ, ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನೇ ಕುಗ್ಗಿಸಲು ಮುಂದಾಯಿತು.
ಸೂಕ್ಷ್ಮ ವಲಯದ ಘೋಷಣೆಗೂ ಮೊದಲೇ ಜೋಗಿಮಟ್ಟಿ ವನ್ಯಧಾಮದ ಸುತ್ತ ಕಲ್ಲು ಕ್ವಾರಿಗಳು ತಲೆಯತ್ತಿದ್ದವು. ಪರವಾನಗಿ ನವೀಕರಣ, ಸ್ಫೋಟ, ಕಲ್ಲು ಸಾಗಣೆಗೆ ತೊಂದರೆಯಾಗುತ್ತಿದ್ದಂತೆ ಕ್ವಾರಿ ಮಾಲೀಕರು ಸರ್ಕಾರದ ಮೇಲೆ ಒತ್ತಡ ಹೇರಿದರು. ಇದಕ್ಕೆ ಮಣಿದ ಸರ್ಕಾರ ವನ್ಯಧಾಮದ ವ್ಯಾಪ್ತಿಯಲ್ಲಿಯೂ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದೆ.
ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ 10,049 ಹೆಕ್ಟೇರ್‌ನಲ್ಲಿ ಹರಡಿಕೊಂಡಿರುವ ಜೋಗಿಮಟ್ಟಿ, ಗಿರಿಧಾಮವೂ ಹೌದು. ಅತಿಹೆಚ್ಚು ಗಾಳಿ ಬೀಸುವ ತಾಣವೆಂದು ಖ್ಯಾತಿ ಪಡೆದಿದೆ. ಅಪರೂಪದ ಕೊಂಡುಕುರಿಯ (ಫೋರ್ ಹಾರ್ನ್ಡ್ ಆಂಟಿಲೋಪ್) ಆವಾಸ ಸ್ಥಾನವೂ ಇದಾಗಿದೆ. ವಿಶ್ವದಲ್ಲಿಯೇ ನಾಲ್ಕು ಕೊಂಬುಗಳುಳ್ಳ ಜಿಂಕೆ ಜಾತಿಗೆ ಸೇರಿದ ಈ ಪ್ರಾಣಿಗೆ ಬೆಟ್ಟಾಡು, ಚೌಸಿಂಗ ಎಂದೂ ಕರೆಯುತ್ತಾರೆ. ಅತ್ಯಂತ ಸೂಕ್ಷ್ಮ ಸ್ವಭಾವದ ಇದು ಅಳಿವಿನಂಚಿನ ಪಟ್ಟಿಯಲ್ಲಿದೆ.
ವನ್ಯಧಾಮವು ಕೃಷ್ಣಮೃಗ, ಚಿರತೆ, ಕರಡಿ, ನವಿಲು, ಕಾಡು ಬೆಕ್ಕು, ಕಾಡು ಹಂದಿ, ನರಿ, ಮೊಲ ಸೇರಿ ಹಲವು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಗಣಿಗಾರಿಕೆ ಪರಿಣಾಮ ಇಲ್ಲಿನ ಆನೆ ಕಾರಿಡಾರ್‌ಗೂ ಕಂಟಕ ಎದುರಾಗಿದೆ.
ಸೂಕ್ಷ್ಮ ವಲಯದಲ್ಲಿ ಹೊಸ ಕ್ವಾರಿಗಳಿಗೆ ಅನುಮತಿ ನೀಡಲು ಅವಕಾಶ ಕಲ್ಪಿಸುವಂತೆ ಅರಣ್ಯ ಇಲಾಖೆಯು ರಾಷ್ಟ್ರೀಯ ವನ್ಯಜೀವಿ ಮಂಡಳಿಯನ್ನು ಕೋರಿದೆ. ಚಿತ್ರದುರ್ಗ ತಾಲ್ಲೂಕಿನ ಮಲ್ಲನಕಟ್ಟೆ ಗ್ರಾಮದ ಸರ್ಕಾರಿ ಖರಾಬು ಜಮೀನಿನಲ್ಲಿ ಗಣಿಗಾರಿಕೆಗೆ ಅನುಮತಿ ಕೋರಲಾಗಿದೆ.
***
‘ಗಣಿಗಾರಿಕೆಗೆ ಉದ್ದೇಶಿಸಿದ ಸ್ಥಳದಲ್ಲಿ ಅಳಿವಿನಂಚಿನ ಯಾವುದೇ ವನ್ಯಜೀವಿ ಇರುವ ಬಗ್ಗೆ ಪುರಾವೆ ಸಿಕ್ಕಿಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದು ವನ್ಯಜೀವಿ ತಜ್ಞರಲ್ಲಿ ಆತಂಕ ಮೂಡಿಸಿದೆ.
– ಜಿ.ಬಿ.ನಾಗರಾಜ್, ಆರ್.ಜಿತೇಂದ್ರ, ಖಲೀಲ್ ಅಹ್ಮದ್ ಶೇಖ್ (ಶಿರಹಟ್ಟಿ)
***
ರಣಹದ್ದುಗಳಿಗೆ ಸಂಚಕಾರ
ರಾಮನಗರ: ಜಿಲ್ಲೆಯ 84 ಗಣಿಗಳಲ್ಲಿ ಸದ್ಯ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದೇ ಹೆಚ್ಚು.
ಜಿಲ್ಲೆಯಲ್ಲಿ 22 ಅಲಂಕಾರಿಕ ಶಿಲೆ ಗಣಿಗಳು ಸಕ್ರಿಯವಾಗಿವೆ. ಇಲ್ಲಿ ಶಿಲೆಗಳನ್ನು ನಾಜೂಕಿನಿಂದ ತೆಗೆಯಬೇಕಾದ ಕಾರಣ ತೀವ್ರ ಸ್ವರೂಪದ ಸ್ಫೋಟಕಗಳನ್ನು ಬಳಸುತ್ತಿಲ್ಲ. ಆದರೆ, ಉಳಿದ ಗಣಿಗಳಲ್ಲಿ ಸ್ಫೋಟದ ತೀವ್ರತೆ ಹೆಚ್ಚಿದೆ. ಇದು ರಣಹದ್ದುಗಳ ಆವಾಸಕ್ಕೂ ಸಂಚಕಾರ ತಂದಿದೆ.
ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ರಾಮದೇವರ ಬೆಟ್ಟದ ಬಳಿಯೇ ಹೆದ್ದಾರಿಗಾಗಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ಇದರಿಂದ ಬೆರಳಣಿಕೆಯಷ್ಟಿರುವ ರಣಹದ್ದುಗಳೂ ವಲಸೆ ಹೋಗುತ್ತಿವೆ ಎಂಬ ಆರೋಪ ಪರಿಸರಪ್ರಿಯರದ್ದು.
ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯು ನಿಯಮಗಳನ್ನು ಗಾಳಿಗೆ ತೂರಿ ಹಗಲು ಹೊತ್ತಿನಲ್ಲೇ ಸ್ಫೋಟಗಳನ್ನು ನಡೆಸುತ್ತಿದೆ. ಈ ಸಂಬಂಧ ಜಿಲ್ಲಾಡಳಿತದ ಎಚ್ಚರಿಕೆಯ ನೋಟಿಸ್‌ಗಳಿಗೂ ಗುತ್ತಿಗೆ ಕಂಪನಿ ಸ್ಪಂದಿಸಿಲ್ಲ. ಬದಲಾಗಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ನಡೆಸುವ ನೆಪವೊಡ್ಡಿ ಹಗಲು ಹೊತ್ತು ಕಲ್ಲು ಬಂಡೆಗಳನ್ನು ಒಡೆಯುವ ಕಾರ್ಯ ನಡೆಸಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
‘ಜಿಲ್ಲೆಯಲ್ಲಿರುವ ಎಲ್ಲ ಗಣಿಗಳ ಶೋಧಕ್ಕೆ ನಿರ್ಧರಿಸಿದ್ದೇವೆ. ಅಲ್ಲಿನ ಸ್ಫೋಟಕಗಳ ಸಂಗ್ರಹ, ಆ ಕಾರ್ಯ ಮಾಡುವ ಕಾರ್ಮಿಕರ ವಿವರ ಕಲೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹೇಳುತ್ತಾರೆ.
ಚಿರತೆ ಆವಾಸಕ್ಕೆ ಅಪಾಯ
ಬೆಂಗಳೂರು: ಚಿರತೆಗಳಿಗೆ ಬೆಟ್ಟ, ಗುಡ್ಡಗಳೇ ಆವಾಸ. ಆದರೆ, ಮಿತಿ ಮೀರಿದ ಅಕ್ರಮ ಕಲ್ಲು ಗಣಿಗಾರಿಕೆಯ ಪರಿಣಾಮ ಬೆಟ್ಟಗಳು ಕರಗುತ್ತಿವೆ. ಮತ್ತೊಂದೆಡೆ ಗಣಿ ಸ್ಫೋಟಕ್ಕೆ ಪ್ರಾಣಿಗಳೂ ದಿಕ್ಕೆಟ್ಟಿವೆ.
ಆಹಾರದ ಮೂಲ ಬರಿದಾಗುತ್ತಿರುವ ಪರಿಣಾಮ ಚಿರತೆಗಳು ಊರಿನತ್ತ ಲಗ್ಗೆ ಇಡುತ್ತಿವೆ. ಇದು ಮಾನವ ಮತ್ತು ಅವುಗಳ ನಡುವಿನ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಕೆಲವೊಮ್ಮೆ ಚಿರತೆಯ ಹತ್ಯೆಯೊಂದಿಗೆ ಈ ಸಂಘರ್ಷ ಪರ್ಯಾವಸಾನಗೊಳ್ಳುತ್ತಿರುವುದು ವಿಪರ್ಯಾಸ. ರಾಜ್ಯದ ಮೈಸೂರು, ತುಮಕೂರು, ರಾಮನಗರ, ಮಂಡ್ಯ, ಹಾಸನ, ಉಡುಪಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈ ಸಂಘರ್ಷ ಉಲ್ಬಣಕ್ಕೆ ಅಕ್ರಮ ಗಣಿಗಾರಿಕೆಯೇ ಮೂಲ ಕಾರಣವಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು. ತುಮಕೂರು ಜಿಲ್ಲೆಯಲ್ಲಿ ಚಿರತೆ ಹಾವಳಿ ಎಲ್ಲೆ ಮೀರಿದೆ. ವನ್ಯಜೀವಿ ವಿಜ್ಞಾನಿಗಳು ನಡೆಸಿರುವ ಅಧ್ಯಯನದ ಪ್ರಕಾರ ಈ ಜಿಲ್ಲೆಯ 93 ಗ್ರಾಮಗಳಲ್ಲಿ ಮಾನವ ಮತ್ತು ಚಿರತೆ ಸಂಘರ್ಷ ಇದೆ.
ಕಾಯ್ದಿಟ್ಟ ಅರಣ್ಯದಲ್ಲೂ ಸ್ಫೋಟದ ಸದ್ದು
ಶಿರಹಟ್ಟಿ: ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಹೇರಳ ಕಲ್ಲಿನ ನಿಕ್ಷೇಪಗಳಿವೆ. ಪ್ರಭಾವಿಗಳ ಬೆಂಬಲದಿಂದ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ತಾಲ್ಲೂಕಿನಲ್ಲಿ ಒಟ್ಟು 48 ಕ್ವಾರಿಗಳು ಮತ್ತು 22 ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಕಲ್ಲಿನ ಕ್ವಾರಿಗಳು ಹಾಗೂ 9 ಕ್ರಷರ್‌ಗಳಿವೆ. ಪರಸಾಪೂರ ಗ್ರಾಮದ ಸುತ್ತಮುತ್ತ ವ್ಯಾಪಕವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.
ಕಪ್ಪತ್ತಗುಡ್ಡವನ್ನು ಸಂರಕ್ಷಿತ ವನ್ಯಜೀವಿಧಾಮವನ್ನಾಗಿ ಘೋಷಣೆ ಮಾಡಲಾಗಿದೆ. ಕಪ್ಪತಗುಡ್ಡವನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ತಾಲ್ಲೂಕಿನಲ್ಲಿ ಬರುವ ಮೂರು ಮತ್ತು ನಾಲ್ಕನೇ ಭಾಗದಲ್ಲಿ ಪ್ರಭಾವಿಗಳ ಬೆಂಬಲದಿಂದ ಕ್ವಾರಿ ಮತ್ತು ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನುತ್ತಾರೆ ಪರಿಸರವಾದಿಗಳು.
ಚಿಕ್ಕಸವಣೂರ ಮತ್ತು ಚನ್ನಪಟ್ಟಣ ಗ್ರಾಮಗಳ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಜಾಣ ಮೌನ ಪರಿಸರಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಫೋಟಕ ಪತ್ತೆ: ದಾಖಲೆ ಪರಿಶೀಲನೆ
ಬೀದರ್: ತಾಲ್ಲೂಕಿನ ಸುಲ್ತಾನಪುರ ಬಳಿ ತೆಲಂಗಾಣ ಗಡಿಯಲ್ಲಿ 16 ಕ್ವಿಂಟಲ್ ಜಿಲೆಟಿನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
‘ಜಿ.ಕೆ.ಕನ್‌ಸ್ಟ್ರಕ್ಷನ್ ಅಧಿಕಾರಿಗಳಿಂದ ಕೆಲ ದಾಖಲೆಗಳನ್ನು ತರಿಸಿಕೊಂಡು ಜಿಲೆಟಿನ್ ಎಲ್ಲಿಂದ ಖರೀದಿಸಲಾಗಿದೆ? ಯಾವ ಕೆಲಸಕ್ಕೆ ಬಳಸಲಾಗುತ್ತಿತ್ತು? ಯಾವಾಗ ಅನುಮತಿ ಪಡೆಯಲಾಗಿದೆ ಇತ್ಯಾದಿ ಮಾಹಿತಿ ಕಲೆ ಹಾಕಿದ್ದೇವೆ.ಈ ವೇಳೆ ಸುರಕ್ಷತಾ ನಿಯಮ ಅನುಸರಿಸದಿರುವುದು ಕಂಡು ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.