ಬೆಂಗಳೂರು: ‘ಗಣಿ ಗುತ್ತಿಗೆ ಪರವಾನಗಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ನಿರ್ದೇಶಿಸಬೇಕು’ ಎಂದು ಕೋರಲಾದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ನಗರದ ಉದ್ಯಮಿ ಎಂ.ಪಿ.ವೇಣುಗೋಪಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.
ಸರದಿ ಪ್ರಕಾರ ಅರ್ಜಿ ವಿಚಾರಣೆಗೆ ಬಂದಾಗ, ಕೋರ್ಟ್ ಅಧಿಕಾರಿ ಸಂಖ್ಯೆಯನ್ನು ಎರಡು ಬಾರಿ ಕೂಗಿದರೂ ಅರ್ಜಿದಾರರ ಪರ ಯಾರೂ ಹಾಜರಾಗದ ಕಾರಣ ನ್ಯಾಯಪೀಠ, ನ್ಯಾಯಿಕ ಪ್ರಕ್ರಿಯೆ ಪಾಲನೆಯ ಲೋಪದ ಆಧಾರದಡಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಅರ್ಜಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಂದಿನ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ತುಷಾರ ಗಿರಿನಾಥ, ಬೆಂಗಳೂರಿನ ಮೆಸರ್ಸ್ ವೀರಭದ್ರಪ್ಪ ಸಂಗಪ್ಪ ಮತ್ತು ವಹಾಬ್ ಗ್ರೂಪ್, ಎಂ.ಉಪೇಂದ್ರನ್, ಮೆಸರ್ಸ್ ಮಿನರಲ್ ಎಂಟರಪ್ರೈಸಸ್ ಲಿಮಿಟೆಡ್ ಕಂಪನಿ ಮತ್ತು ಗುಬ್ಬಿಯ ಮೆಸರ್ಸ್ ಜಯರಾಂ ಮಿನರಲ್ಸ್ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಮನವಿ ಏನಿತ್ತು?
‘ಗಣಿ ಗುತ್ತಿಗೆಗಳ ಕಾನೂನುಬಾಹಿರ ನವೀಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು. ಈ ವಿಚಾರವಾಗಿ ವರದಿ ನೀಡುವಂತೆ ಲೋಕಾಯುಕ್ತಕ್ಕೆ ಸೂಚಿಸಬೇಕು. ರಾಮಗಡ ಮಿನರಲ್ ಆ್ಯಂಡ್ ಮೈನಿಂಗ್ ಪ್ರೈ. ಲಿಮಿಟೆಡ್, ವೀರಭದ್ರಪ್ಪ ಸಂಗಪ್ಪ ಆ್ಯಂಡ್ ಕಂಪನಿಗಳಿಗೆ ನೀಡಲಾಗಿರುವ ಗಣಿ ಗುತ್ತಿಗೆ ರದ್ದುಪಡಿಸಬೇಕು. ಎಲ್ಲಾ ಗಣಿ ಗುತ್ತಿಗೆ ಪರವಾನಗಿ ಕಾನೂನುಬಾಹಿರ ಎಂದು ಘೋಷಿಸಬೇಕು. ಇದರಿಂದ ಆಗಿರುವ ಆರ್ಥಿಕ ನಷ್ಟವನ್ನು ಅಕ್ರಮ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.