ADVERTISEMENT

ಸಂಪುಟ ವಿಸ್ತರಣೆಗೆ ಹಲವು ‘ಸಿಕ್ಕು’: ಅಮಿತ್ ಶಾ ಆಯ್ಕೆಯೇ ಅಂತಿಮ

ಆಕಾಂಕ್ಷಿಗಳ ಪರ ಒತ್ತಡ ಹೇರುವ ಅವಕಾಶ ಕಡಿಮೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:19 IST
Last Updated 29 ಜುಲೈ 2019, 20:19 IST
   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ರಚನೆಗಾಗಿ ಜಾತಿ, ಪ್ರಾದೇಶಿಕ ಸಮತೋಲನ ಮತ್ತು ಹಿರಿತನದ ಆಧಾರದಲ್ಲಿ ಪಟ್ಟಿ ತಯಾರಿಸಲಾಗಿದ್ದು, ಇದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಒಪ್ಪಿಗೆ ಪಡೆಯಬೇಕಾಗಿದೆ.

ಸಂಪುಟ ರಚನೆಯಲ್ಲಿ ಸಿಕ್ಕುಗಳಿದ್ದು, ಅವುಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಬಿಡಿಸಬೇಕಾಗಿದೆ.

ಸಂಸತ್‌ ಅಧಿವೇಶನ ಆಗಸ್ಟ್‌ 7 ರವರೆಗೆ ನಡೆಯಲಿರುವುದರಿಂದ ಸಚಿವ ಸಂಪುಟ ರಚನೆ ಆ ಬಳಿಕವೇ ಆಗಲಿದೆ. ಈಗಾಗಲೇ 35 ರಿಂದ 40 ಶಾಸಕರ ಪಟ್ಟಿ ಸಿದ್ಧಪಡಿಸಲಾಗಿದೆ. ಯಡಿಯೂ ರಪ್ಪ ಗುರುವಾರ ದೆಹಲಿಗೆ ಪಟ್ಟಿಯನ್ನೂ ಒಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗಾಗಿ 10 ಸಚಿವ ಸ್ಥಾನಗಳನ್ನು ಬಿಟ್ಟು, ಉಳಿದ ಸಚಿವ ಸ್ಥಾನಗಳಿಗೆ ಒಂದೇ ಕಂತಿನಲ್ಲಿ ಭರ್ತಿ ಮಾಡಲಾಗುವುದು. 22 ಸಚಿವ ಸ್ಥಾನ ತುಂಬಲು ಸ್ವಲ್ಪ ದೊಡ್ಡ ಪಟ್ಟಿಯನ್ನೇ ತಯಾರಿಸಿಕೊಳ್ಳಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ವಿವಿಧ ಕಾರಣಗಳಿಗೆ ಹೆಸರು ಕೆಡಿಸಿಕೊಂಡ ಶಾಸಕರಿಗೆ ಪಟ್ಟಿಯಲ್ಲಿ ಜಾಗ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಂಪುಟ ರಚನೆ ಸಂಬಂಧ ಯಡಿಯೂರಪ್ಪ ಅವರ ಜತೆಅಮಿತ್‌ ಶಾ ಒಂದು ಸುತ್ತು ಮಾತುಕತೆ ನಡೆಸುತ್ತಾರೆ. ಬಳಿಕ ಪ್ರತಿ ಶಾಸಕನ ಹಿನ್ನೆಲೆ, ಅನುಭವ ಮತ್ತು ಕಾರ್ಯಕ್ಷಮತೆ ಗಮನಿಸಿ ಪಟ್ಟಿ ಆಖೈರುಗೊಳಿಸುತ್ತಾರೆ. ಆದ್ದರಿಂದ, ಸಚಿವ ಸ್ಥಾನಕ್ಕೆ ಯಾರೂ ಲಾಬಿ ಮಾಡು ವ ಸ್ಥಿತಿಯಲ್ಲಿ ಇಲ್ಲ ಎಂದು ಮೂಲಗಳು ಹೇಳಿವೆ. ‘ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರ ರಚನೆ ಆಗಿದ್ದು, ಸ್ಥಿರತೆ ಇಲ್ಲದಿರುವ ಕಾರಣ ಕೆಲವು ಶಾಸಕರು ಸಚಿವ ಸ್ಥಾನಕ್ಕೆ ವರಿಷ್ಠರ ಮೇಲೆ ಒತ್ತಡ ಹೇರದಿರಲು ತೀರ್ಮಾನಿಸಿದ್ದಾರೆ. ನಮ್ಮದೇ ಸರ್ಕಾರ ಇದ್ದರೆ ಕನಿಷ್ಠ ವಿಧಾನಸಭಾ ಕ್ಷೇತ್ರಕ್ಕಾದರೂ ಒಂದಷ್ಟು ಅನುದಾನ ಸಿಗುತ್ತದೆ. ಅಭಿವೃದ್ಧಿ ಕೆಲಸವಾದರೂ ಮಾಡಿಸಬಹುದು’ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಹಿರಿ ತಲೆಗಳ ದೊಡ್ಡ ದಂಡು

ಬಿಜೆಪಿಯಲ್ಲಿ ಹಿರಿಯ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಬಿಡಬೇಕು ಎಂಬ ಲೆಕ್ಕಾಚಾರ ಒಂದು ಕಡೆಯಾದರೆ, ಪ್ರದೇಶ ಮತ್ತು ಜಾತಿ ಆಧಾರದಲ್ಲಿ ತೆಗೆದುಕೊಂಡರೂ ಆಯ್ಕೆ ಸುಲಭವಲ್ಲ. ಇದರ ಸಮತೋಲನ ಕಷ್ಟದ ಕೆಲಸ ಎನ್ನುತ್ತವೆ ಬಿಜೆಪಿ ಮೂಲಗಳು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಹಿರಿಯ ಶಾಸಕರಾದ ಗೋವಿಂದ ಕಾರಜೋಳ, ಸಿ.ಎಂ.ಉದಾಸಿ, ವಿ.ಸೋಮಣ್ಣ, ಉಮೇಶ್‌ ಕತ್ತಿ, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸುರೇಶ್‌ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು. ಆದರೆ, ಇವರಲ್ಲಿ ಯಾರನ್ನು ಕೈಬಿಟ್ಟರೂ ಕಷ್ಟ ಎಂಬ ಸ್ಥಿತಿ ಇದೆ.

ಜನತಾ ಪರಿವಾರದಿಂದ ವಲಸೆ ಬಂದ ಪ್ರಮುಖರಲ್ಲಿ ಕೆಲವರಿಗಾದರೂ ಸ್ಥಾನ ಕಲ್ಪಿಸಬೇಕು. ಇಲ್ಲವಾದಲ್ಲಿ, ಅವರನ್ನು ಯಾವುದೇ ಹಂತದಲ್ಲಾದರೂ ಕಾಂಗ್ರೆಸ್‌–ಜೆಡಿಎಸ್‌ ಸೆಳೆಯುವ ಭೀತಿ ಇದ್ದೇ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೊದಲ ಬಾರಿ ಶಾಸಕರಾಗಿ ಆಯ್ಕೆ ಆದವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇಲ್ಲ. ವಿಧಾನಪರಿಷತ್ತಿನಲ್ಲಿ ಒಬ್ಬರಿಗೆ ಮಾತ್ರ ಮಂತ್ರಿ ಆಗುವ ಅವಕಾಶ ಸಿಗಬಹುದು ಎನ್ನಲಾಗಿದೆ.

‘17 ಶಾಸಕರ ಅನರ್ಹ ಮಾಡಿದ ರಮೇಶ್‌ಕುಮಾರ್‌ ನಿರ್ಧಾರ ಸರಿ’

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮ ಸರಿಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಜಾತ್ಯತೀತ ಮತಗಳಿಂದ ಚುನಾಯಿತರಾದ ಈ ಶಾಸಕರು ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಜನಾದೇಶಕ್ಕೆ ದ್ರೋಹ ಎಸಗಿದ್ದಾರೆ. ಚುನಾಯಿತರಾದ ಬಳಿಕ ಪಕ್ಷ ಬದಲಿಸುವ ಇಂತಹ ಶಾಸಕರಿಗೆ ಶಿಕ್ಷೆಯಾಗಬೇಕು’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.