ADVERTISEMENT

ಪರಿಸರ ಮಾಲಿನ್ಯ: ಪ್ರಾಧಿಕಾರ, ತಜ್ಞರ ಸಮಿತಿಗೆ ಹೆಚ್ಚಿನ ಅಧಿಕಾರ ಅಗತ್ಯ

ಪರಿಸರ ಸಚಿವ ಸಿ.ಪಿ. ಯೋಗೇಶ್ವರ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 6:53 IST
Last Updated 7 ಜುಲೈ 2021, 6:53 IST
ಸಿ.ಪಿ. ಯೋಗೇಶ್ವರ
ಸಿ.ಪಿ. ಯೋಗೇಶ್ವರ   

ಬೆಂಗಳೂರು: ಗಣಿಗಾರಿಕೆ, ನಿರ್ಮಾಣ ಕಾಮಗಾರಿಗಳು, ಕೈಗಾರಿಕೆ ಮತ್ತು ಔಷಧಿ ಉತ್ಪಾದನಾ ಕಂಪನಿಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ರಾಜ್ಯ ಮಟ್ಟದ ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದ ತಜ್ಞರ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಅಗತ್ಯವಿದೆ ಎಂದು ಪರಿಸರ ಸಚಿವ ಸಿ.ಪಿ. ಯೋಗೇಶ್ವರ ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ನಡೆದ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಮತ್ತು ತಜ್ಞರ ಸಮಿತಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಎ ವರ್ಗದ ಚಟುವಟಿಕೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರುತ್ತವೆ. ‘ಬಿ’ ವರ್ಗದ ಚಟುವಟಿಕೆಗಳು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದರೂ, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯ ಪ್ರವೇಶಿಸಿ ನಿಯಂತ್ರಣ ಮಾಡುತ್ತಿದೆ’ ಎಂದರು.

‘ಬಿ, ಬಿ–1 ಮತ್ತು ಬಿ–2 ವರ್ಗದ ಅಡಿಯಲ್ಲಿ ಬರುವ ಎಲ್ಲ ಚಟುವಟಿಕೆಗಳ ಮೇಲೂ ಪರಿಸರ ಇಲಾಖೆಯ ನಿಯಂತ್ರಣ ಅಗತ್ಯ. ಈ ಸಂಬಂಧ ಆದೇಶಗಳನ್ನು ಹೊರಡಿಸುವ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಪ್ರಸ್ತಾವಗಳನ್ನು ಸಲ್ಲಿಸಿ’ ಎಂದು ಸಚಿವರು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್‌ ಕುಮಾರ್‌ ಮತ್ತು ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷೆ ಶಾಶ್ವತಿ ಮಿಶ್ರಾ ಅವರಿಗೆ ಸೂಚಿಸಿದರು.

ADVERTISEMENT

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿರ್ಮಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿರುವ ಬೃಹತ್‌ ಉದ್ದಿಮೆಗಳಿಂದಲೂ ಜಲ, ವಾಯು ಮತ್ತು ಪರಿಸರ ಮಾಲಿನ್ಯ ನಡೆಯುತ್ತಿದೆ. ಅವುಗಳ ಮೇಲೂ ನಿಯಂತ್ರಣ ಕ್ರಮಕ್ಕೆ ಅವಕಾಶ ಇರಬೇಕು. ಇಲ್ಲವಾದರೆ ಇತರ ಉದ್ದಿಮೆಗಳ ಮೇಲೆ ಕ್ರಮ ಕೈಗೊಂಡು, ಮಾಲಿನ್ಯ ತಡೆಯುವುದು ಕಷ್ಟವಾಗುತ್ತದೆ ಎಂದು ಪ್ರಾಧಿಕಾರ ಹಾಗೂ ಸಮಿತಿಗಳ ಸದಸ್ಯರು ಹೇಳಿದರು. ಅದಕ್ಕೆ ಪೂರಕವಾಗಿ ಆದೇಶ ಹೊರಡಿಸುವ ಭರವಸೆ ನೀಡಿದ ಸಚಿವರು, ಪ್ರಸ್ತಾವ ಸಲ್ಲಿಸಲು ನಿರ್ದೇಶನ ನೀಡಿದರು.

ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರ ಮತ್ತು ತಜ್ಞರ ಸಮಿತಿಗಳ ಮುಂದೆ ಗಣಿಗಾರಿಕೆಗೆ ಸಂಬಂಧಿಸಿದ 78, ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ 34 ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಎರಡು ಕಡತಗಳು ಬಾಕಿ ಇವೆ. ಇದೇ 23 ಮತ್ತು 24ರಂದು ಸಭೆ ನಿಗದಿಯಾಗಿದ್ದು, ಎಲ್ಲ ಕಡತಗಳನ್ನೂ ವಿಲೇವಾರಿ ಮಾಡಲಾಗುವುದು ಎಂದು ಪ್ರಾಧಿಕಾರ ಹಾಗೂ ಸಮಿತಿಯ ಸದಸ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.