
ಮಡಿಕೇರಿ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರು ಮುಖ್ಯಮಂತ್ರಿ ಆಗಬೇಕು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ರಾಜ್ಯದಲ್ಲಿ ದಲಿತ ನಾಯಕರು ಮುಖ್ಯಮಂತ್ರಿ ಆಗಬಾರದು ಎಂದೇನಿಲ್ಲ. ಆದರೆ, ಅದಕ್ಕೆ ಅವಕಾಶಗಳು, ಸನ್ನಿವೇಶಗಳು ಬರಬೇಕಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ದಲಿತರೇ ಕಾಂಗ್ರೆಸ್‌ನ ಬೆನ್ನೆಲುಬು ಎಂಬುದು ಹೈಕಮಾಂಡ್‌ಗೆ ತಿಳಿದಿದೆ. ಬೆನ್ನೆಲುಬು ಕಳೆದುಕೊಂಡು ಪಕ್ಷ ಬಲವಾಗಿ ಇರಲು ಸಾದ್ಯವಿಲ್ಲ. ಹೀಗಾಗಿ, ಬೆನ್ನೆಲುಬನ್ನು ಬಲಪಡಿಸಬೇಕು ಎಂದು ಪ್ರತಿಪಾದಿಸಿದರು.
ದಲಿತರು ಗಣನೀಯ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಇದ್ದಾರೆ. ಅವರು ಸದಾ ಕಾಂಗ್ರೆಸ್‌ಗೆ ಬೆನ್ನೆಲುಬುವಾಗಿ ನಿಂತಿದ್ದಾರೆ. ಆದರೆ, ದಲಿತ ನಾಯಕರು ಸುಮ್ಮನಿದ್ದು, ಬೇರೆಯವರು ಮುಖ್ಯಮಂತ್ರಿಯಾಗಬೇಕು ಎಂಬ ಚರ್ಚೆ ನಡೆದಿದೆ ಎಂದರು.
ದಲಿತರು ಮುಖ್ಯಮಂತ್ರಿ ಅಗಬೇಕು ಎಂಬುದು ಹೈಕಮಾಂಡ್ ಗಮನದಲ್ಲಿಟ್ಟುಕೊಂಡಿದೆ. ಸಿದ್ದರಾಮಯ್ಯ ಇರುವ ತನಕ ಅವರೇ ಮುಖ್ಯಮಂತ್ರಿ. ನಂತರದ ದಿನಗಳಲ್ಲಿ ಎಲ್ಲರೂ ಸೇರಿ ದಲಿತರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರೂ ಸೇರಿ ಸೂಕ್ತವಾದ ದಲಿತ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಇದರಲ್ಲಿ ಯಾವುದೇ ಗೊಂದಲಗಳು ಆಗಬಾರದು. ಅದು ಎಲ್ಲರ ಆಸೆ ಎಂದರು.
ಡಿ.ಕೆ.ಶಿವಕುಮಾರ್ ಅವರ ಹೈಕಮಾಂಡ್ ತನ್ನ ಶ್ರಮಕ್ಕೆ ಸ್ಥಾನಮಾನವನ್ನು ಕೊಡುತ್ತದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರತಿಯೊಬ್ಬರಲ್ಲೂ ಅಸೆ, ಆಕಾಂಕ್ಷೆಗಳು ಇರುತ್ತದೆ. ಅದಕ್ಕೆ ತಪ್ಪು ಎಂದು ಹೇಳಲು ಅಗುವುದಿಲ್ಲ. ಆದರೆ, ಹೈಕಮಾಂಡ್ ಪ್ರತಿಯೊಂದನ್ನೂ ಪರಾಮರ್ಶೆ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಶಾಸಕರೊಬ್ಬರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಿಕ್ಕಿ ಬಿದ್ದಿದ್ದಾರೆ. ಈಗ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.