ADVERTISEMENT

ಸಚಿವ ಮಾಧುಸ್ವಾಮಿಗೆ ಹಿಂದಿನ ಸಾಲು!

ಬೊಮ್ಮಾಯಿ, ಕತ್ತಿ ಮುಂದಿನ ಸಾಲಿಗೆ ‘ಬಡ್ತಿ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 17:07 IST
Last Updated 28 ಜನವರಿ 2021, 17:07 IST
ಮಾಧುಸ್ವಾಮಿ
ಮಾಧುಸ್ವಾಮಿ    

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ವಿರೋಧ ಪಕ್ಷಗಳು ನಿರಂತರ ನಡೆಸುತ್ತಿದ್ದ ವಾಗ್ದಾಳಿಗೆ ಗುರಾಣಿಯಂತೆ ನಿಲ್ಲುತ್ತಿದ್ದ ಸಚಿವ ಜೆ.ಸಿ.ಮಾಧುಸ್ವಾಮಿಗೆ ಈಗ ‘ಹಿಂಬಡ್ತಿ’ ಆಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾಗಿದ್ದಾಗ ಅವರಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಇತ್ತು. ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆ ಬಳಿಕ ಇದೀಗ ಎರಡನೇ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಾಧುಸ್ವಾಮಿ ಅವರು ಈ ಹಿಂದಿನಂತೆ ಉತ್ಸಾಹದಲ್ಲಿ ಓಡಾಟ ಮಾಡದೇ, ತಮ್ಮ ಪಾಡಿಗೆ ತಾವು ಕುಳಿತಿದ್ದುದು ಗುರುವಾರ ಆರಂಭ ವಾದ ಅಧಿವೇಶನದಲ್ಲಿ ಕಾಣಿಸಿತು.

ಈ ಹಿಂದಿನ ಅಧಿವೇಶನಗಳಲ್ಲಿ ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ವಿರುದ್ಧ ಆರೋಪ ಮತ್ತು ವಾಗ್ದಾಳಿ ನಡೆದ ಸಂದರ್ಭ ದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್‌.ಕೆ.ಪಾಟೀಲ ಅವರಂತಹ ಘಟಾನುಘಟಿಗಳನ್ನೇ ಮಾಧುಸ್ವಾಮಿ ತಮ್ಮ ವಾಕ್ಚಾತುರ್ಯದಿಂದ ಹಿಮ್ಮೆಟ್ಟಿಸಿದ್ದರು. ಇನ್ನು ಮುಂದೆ ಆ ಕೆಲಸ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಗಲೇರಿದೆ. ಬೊಮ್ಮಾಯಿ ಮತ್ತು ಆಹಾರ ಸಚಿವ ಉಮೇಶ ಕತ್ತಿಯವರಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಸಚಿವರ ಸಾಲಿನಲ್ಲಿ ಕೂರದ ಸಿಂಗ್‌

ತಮ್ಮ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವ ಆನಂದ್‌ಸಿಂಗ್ ಅವರು ಸಚಿವರಿಗೆ ನಿಗದಿಯಾದ ಆಸನದಲ್ಲಿ ಕೂರದೇ ಶಾಸಕರ ಸಾಲಿನಲ್ಲಿ ಕುಳಿತ್ತಿದ್ದರು. ಅನೇಕ ಶಾಸಕರು ಅವರ ಬಳಿ ಬಂದು ಮಾತನಾಡಿಸಿ ಹೋಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.