ADVERTISEMENT

ಕಾರ್ಯಕರ್ತರು ಹೇಳಿದ್ದನ್ನೇ ನಾನು ಹೇಳಿದ್ದೆ: ಎಂ.ಟಿ.ಬಿ. ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 12:42 IST
Last Updated 31 ಅಕ್ಟೋಬರ್ 2022, 12:42 IST
ಎಂ.ಟಿ.ಬಿ.ನಾಗರಾಜ್‌
ಎಂ.ಟಿ.ಬಿ.ನಾಗರಾಜ್‌   

ಬೆಂಗಳೂರು: ‘ಪೊಲೀಸ್‌ ಇನ್‌ಸ್ಪೆಕ್ಟರ್‌ ನಂದೀಶ್‌ ವರ್ಗಾವಣೆಗಾಗಿ ಯಾರಿಗೂ ಲಂಚ ಕೊಟ್ಟಿರಲಿಲ್ಲ, ಯಾರೂ ಪಡೆದೂ ಇರಲಿಲ್ಲ. ಸಾವಿನ ದಿನ ಪಕ್ಷದ ಕಾರ್ಯಕರ್ತರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ಹೇಳಿದರು.

‘₹ 70 ಲಕ್ಷ– 80 ಲಕ್ಷ ಕೊಟ್ಟು ಇನ್‌ಸ್ಪೆಕ್ಟರ್‌ ಹುದ್ದೆಗೆ ಬಂದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ’ ಎಂದು ಹೇಳಿದ್ದ ಕುರಿತು ವಿಧಾನಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ‘ಲಂಚದ ಕುರಿತು ನನಗೆ ಯಾವ ಮಾಹಿತಿಯೂ ತಿಳಿದಿಲ್ಲ’ ಎಂದರು.

‘ನಂದೀಶ್‌ ನಮ್ಮ ಸಮುದಾಯದವರು. ಅವರು ಹೃದಯಾಘಾತದಿಂದ ಮೃತಪಟ್ಟಿರುವ ಕುರಿತು ಅಲ್ಲಿ ಹಿಂದೆ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿದ್ದ ಅಧಿಕಾರಿ ದೂರವಾಣಿ ಕರೆಮಾಡಿ ತಿಳಿಸಿದ್ದರು. ಆಗ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕಾಗಿ ಹೋಗಿದ್ದೆ. 70ರಿಂದ 80 ಲಕ್ಷ ಕೊಟ್ಟು ಇನ್‌ಸ್ಪೆಕ್ಟರ್‌ ಹುದ್ದೆಗೆ ಬಂದಿದ್ದು, ಅಮಾನತಾಗಿದ್ದರಿಂದ ಒತ್ತಡದಲ್ಲಿದ್ದರು ಎಂದು ನಮ್ಮ ಪಕ್ಷದ ಕಾರ್ಯಕರ್ತರು ಹೇಳಿದರು.

ADVERTISEMENT

‘ನಾನು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಲಿಲ್ಲ. ಕಾರ್ಯಕರ್ತರ ಜತೆ ಮಾತನಾಡುತ್ತಾ ಹೋಗುತ್ತಿದ್ದೆ. 70 ಲಕ್ಷ, 80 ಲಕ್ಷ ಕೊಟ್ಟು ಬಂದರೆ ಬಾಯಿ ಬಡಿದುಕೊಳ್ಳಬೇಕಾಗುತ್ತದೆ ಎಂದಷ್ಟೇ ಹೇಳಿದ್ದೆ. ಅದನ್ನೇ ಬೇರೆ ರೀತಿಯಲ್ಲಿ ಬಿಂಬಿಸಲಾಗಿದೆ. ನಮ್ಮ ಸರ್ಕಾರದಲ್ಲಿ ಲಂಚ ಪಡೆದು ವರ್ಗಾವಣೆ ಮಾಡುವ ಪದ್ಧತಿಯೇ ಇಲ್ಲ’ ಎಂದರು.

ಕೆಲವರು ಮುಖ್ಯಮಂತ್ರಿ ಮತ್ತು ಸಚಿವರ ರಾಜೀನಾಮೆ ಕೇಳುತ್ತಿದ್ದಾರೆ. ಅಂತಹ ಪ್ರಮೇಯವೇ ಉದ್ಭವಿಸಿಲ್ಲ. ಲಂಚದ ಆರೋಪದ ಕುರಿತು ಯಾವುದೇ ತನಿಖೆಗೂ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.