
ಬೆಂಗಳೂರು: ಉದ್ಯಮಶೀಲತೆಗೆ ಮುಂದಿನ ಐದು ವರ್ಷ ಇನ್ನಷ್ಟು ಉತ್ತೇಜನ ನೀಡಿ, ಕರ್ನಾಟಕವನ್ನು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ‘ನವೋದ್ಯಮ ನೀತಿ 2025–30’ನ್ನು ಅನಾವರಣಗೊಳಿಸಲಾಗಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.
ರಾಷ್ಟ್ರೀಯ ‘ನವೋದ್ಯಮ ಮಾಸ’ದ ಅಂಗವಾಗಿ ಎಲೆಕ್ಟ್ರಾನಿಕ್ಸ್, ಐ.ಟಿ ಮತ್ತು ಬಿ.ಟಿ ಇಲಾಖೆಯ ಆಶ್ರಯದಲ್ಲಿ ಶನಿವಾರ ನಡೆದ, ನವೋದ್ಯಮಗಳಿಗೆ ನೆರವಾಗುವ ‘ಐಡಿಯಾ2ಪಿಒಸಿ ಎಲಿವೇಟ್ –2025’ ಯೋಜನೆಯ 146 ವಿಜೇತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಈ ನೀತಿಯನ್ನು ಬಿಡುಗಡೆ ಮಾಡಿದರು.
‘ಈ ನೀತಿ ಜಾರಿಗಾಗಿ ₹570.67 ಕೋಟಿ ಮೀಸಲಿರಿಸಲಾಗಿದ್ದು, 2030ರ ವೇಳೆಗೆ ಬೆಂಗಳೂರು ಹೊರಗಿನ ಕ್ಲಸ್ಟರ್‌ಗಳಲ್ಲಿ ಕನಿಷ್ಠ 10 ಸಾವಿರ ನವೋದ್ಯಮಗಳು ಸೇರಿದಂತೆ ರಾಜ್ಯದಾದ್ಯಂತ 25 ಸಾವಿರ ನವೋದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಹಣಕಾಸು, ಪೋಷಣೆ, ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ, ಅಂತರರಾಷ್ಟ್ರೀಯ ಸಹಯೋಗ, ಸೇರ್ಪಡೆ, ಸುಸ್ಥಿರತೆ ಮತ್ತು ನಿಯಂತ್ರಣ ಕ್ರಮಗಳಿಗೆ ನೆರವು ಸೇರಿದಂತೆ ಒಟ್ಟು ಏಳು ಪ್ರಮುಖ ಆಧಾರ ಸ್ತಂಭಗಳನ್ನು ಈ ನೀತಿ ಆಧರಿಸಿದೆ’ ಎಂದರು.
‘ಮಹಿಳೆಯರೇ ನಡೆಸುವ ಉದ್ಯಮಗಳು, ತಳಮಟ್ಟದ ನಾವೀನ್ಯಕಾರರು, ಗ್ರಾಮೀಣ ಉದ್ಯಮಿಗಳು ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಎಲ್ಲರ ಒಳಗೊಳ್ಳುವಿಕೆಗೆ ನೀತಿಯು ಆದ್ಯತೆ ನೀಡಲಿದೆ. ಆರಂಭಿಕ ಪರಿಕಲ್ಪನೆಯಿಂದ ಆರಂಭಿಸಿ ಜಾಗತಿಕ ವಿಸ್ತರಣೆ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸುವ ಹಂತದವರೆಗೂ ನವೋದ್ಯಮಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ’ ಎಂದೂ ಅವರು ವಿವರಿಸಿದರು.
ಮೂರು ಹೊಸ ಉಪಕ್ರಮಗಳ ಘೋಷಣೆ: ಸ್ಟಾರ್ಟ್ಅಪ್ ವ್ಯವಸ್ಥೆ ಬಲಪಡಿಸುವ, ಡೀಪ್‌ಟೆಕ್ ನಾವೀನ್ಯತೆಗೆ ವೇಗ ನೀಡುವ ಮತ್ತು ಬೆಂಗಳೂರಿನ ಆಚೆಗೆ ನವೋದ್ಯಮಗಳ ಸ್ಥಾಪನೆ ಉತ್ತೇಜಿಸಲು ₹ 75 ಕೋಟಿ ಮೊತ್ತದ ನಿಧಿ ಸ್ಥಾಪಿಸುವ ಮೂರು ಹೊಸ ಉಪಕ್ರಮಗಳನ್ನು ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ಶಾಸಕ ರಿಜ್ವಾನ್ ಅರ್ಷದ್, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಇದ್ದರು. ಕೊ-ರೋವರ್ ಎಐ ಸ್ಥಾಪಕ ಮತ್ತು ಸಿಇಒ ಅಂಕುಶ್ ಸಬರ್‌ವಾಲ್ ಮತ್ತು ಟ್ರಾಷ್‌ಕಾನ್ -ನ ಸ್ಥಾಪಕಿ ಮತ್ತು ಸಿಇಒ ಆರ್.ಎಂ. ನಿವೇದಾ ತಮ್ಮ ನವೋದ್ಯಮಗಳ ಯಶೋಗಾಥೆಗಳನ್ನು ಹಂಚಿಕೊಂಡರು.
ಸ್ಟಾರ್ಟ್ಅಪ್ ನೀತಿ ಜಾರಿಗೆ ₹ 570.67 ಕೋಟಿ ನಿಗದಿ
25 ಸಾವಿರ ಸ್ಟಾರ್ಟ್ಅಪ್ ಸ್ಥಾಪಿಸುವ ಗುರಿ
ಮಹಿಳೆ ನೇತೃತ್ವದ ಹಾಗೂ ಗ್ರಾಮೀಣ ನವೋದ್ಯಮಗಳಿಗೆ ಆದ್ಯತೆ
ಎಲ್ಲ ಹಂತಗಳಲ್ಲಿ ನವೋದ್ಯಮಗಳಿಗೆ ಬೆಂಬಲ ಭರವಸೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.