ADVERTISEMENT

ಈಶ್ವರ ಖಂಡ್ರೆ ಆರೋಪದಲ್ಲಿ ಹುರುಳಿಲ್ಲ: ವಿ. ಸೋಮಣ್ಣ

ವಸತಿ ಸಚಿವ ವಿ. ಸೋಮಣ್ಣ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 19:23 IST
Last Updated 12 ಫೆಬ್ರುವರಿ 2021, 19:23 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ಅನುದಾನ ಬಿಡುಗಡೆ ಸ್ಥಗಿತ, ಭ್ರಷ್ಟಾಚಾರ, ಕಳಂಕಿತ ಅಧಿಕಾರಿಗಳಿಗೆ ರಕ್ಷಣೆ, ವಸತಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸೇರಿದಂತೆ ತಮ್ಮ ಹಾಗೂ ವಸತಿ ಇಲಾಖೆ ವಿರುದ್ಧ ಕಾಂಗ್ರೆಸ್‌ ಶಾಸಕ ಈಶ್ವರ ಖಂಡ್ರೆ ಮಾಡಿರುವ ಯಾವುದೇ ಆರೋಪಗಳಲ್ಲೂ ಹುರುಳಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಈಶ್ವರ ಖಂಡ್ರೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಐದು ಪುಟಗಳ ದೀರ್ಘ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ‘18 ತಿಂಗಳಿನಿಂದ ವಸತಿ ಯೋಜನೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಈ ಅವಧಿಯಲ್ಲಿ ₹ 2,514.17 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಖಂಡ್ರೆ ಪ್ರತಿನಿಧಿಸುವ ಭಾಲ್ಕಿ ವಿಧಾನಸಭೆ ಕ್ಷೇತ್ರ ಒಂದಕ್ಕೆ ₹ 8.72 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯ ಗುತ್ತಿಗೆದಾರರಿಗೆ ₹ 200 ಕೋಟಿ ಮುಂಗಡ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಶೇಕಡ 5ರಷ್ಟು ಬ್ಯಾಂಕ್‌ ಭದ್ರತೆ ಪಡೆದು ಈವರೆಗೂ ₹ 146.90 ಕೋಟಿ ಮುಂಗಡ ನೀಡಲಾಗಿದೆ. ಈ ಪೈಕಿ ₹ 88.46 ಕೋಟಿ ಹಿಂದಿನ ಸರ್ಕಾರದ ಅವಧಿಯಲ್ಲೇ ಪಾವತಿಯಾಗಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಗುತ್ತಿಗೆದಾರರಿಗೆ ₹ 400 ಕೋಟಿ ಮುಂಗಡ ನೀಡಲಾಗಿದೆ ಎಂಬುದೂ ಸತ್ಯಕ್ಕೆ ದೂರ. ಮಂಡಳಿಯಿಂದ ₹ 94.28 ಕೋಟಿಯಷ್ಟು ಮುಂಗಡವನ್ನು ಹಿಂದಿನ ಸರ್ಕಾರ ನೀಡಿತ್ತು. ಈ ಸರ್ಕಾರದ ಅವಧಿಯಲ್ಲಿ ₹ 5.27 ಕೋಟಿ ಮಾತ್ರ ಮುಂಗಡ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಒಂದು ಲಕ್ಷ ಮನೆಗಳ ಯೋಜನೆಯಲ್ಲಿ ಫಲಾನುಭವಿ ಆಯ್ಕೆಯಾಗಿಲ್ಲ ಎಂಬ ಆರೋಪದಲ್ಲೂ ಹುರುಳಿಲ್ಲ. 48,646 ಫಲಾನುಭವಿಗಳನ್ನು ಹಿಂದಿನ ಸರ್ಕಾರವೇ ಆಯ್ಕೆ ಮಾಡಿತ್ತು. ಈ ಯೋಜನೆಗೆ ಜಮೀನು ಹಸ್ತಾಂತರಿಸಿಲ್ಲ ಎಂಬ ಆರೋಪವೂ ಸತ್ಯಕ್ಕೆ ದೂರ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 354 ಎಕರೆ ಜಮೀನನ್ನು ಹಸ್ತಾಂತರ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ನ್ಯಾಯಾಲಯದ ಆದೇಶದಂತೆ ಕ್ರಮ: ಅಗ್ರಹಾರ ದಾಸರಹಳ್ಳಿ ಕೊಳಚೆ ಪ್ರದೇಶದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿದ ಮನೆಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ 17 ಜನರನ್ನು ನ್ಯಾಯಾಲಯದ ಆದೇಶದಂತೆ ತೆರವು ಮಾಡಲಾಗಿದೆ. ಕಾಂಗ್ರೆಸ್‌ ಬೆಂಬಲಿತರು ಎಂಬ ಕಾರಣಕ್ಕೆ ಹೊರಹಾಕಲಾಗಿದೆ ಎಂದು ಈಶ್ವರ ಖಂಡ್ರೆ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.