ADVERTISEMENT

‘ಆತ್ಮನಿರ್ಭರ’ ಗುರಿ ಸಾಧನೆಗೆ ವಿಶೇಷ ಆದ್ಯತೆ’–ಸಚಿವ ಎಸ್‌.ಟಿ.ಸೋಮಶೇಖರ್‌

ಸಂದರ್ಶನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 21:46 IST
Last Updated 13 ನವೆಂಬರ್ 2020, 21:46 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಬೆಂಗಳೂರು: ‘ರೈತರಿಗೆ, ಹೈನುಗಾರರಿಗೆ, ಮೀನುಗಾರರಿಗೆ ಹಾಗೂ ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾಗಿರುವವರಿಗೆ ಹಣದ ಬಹಳಷ್ಟು ಅವಶ್ಯ ಇರುತ್ತದೆ. ಹಾಗಾಗಿ ’ಆತ್ಮ ನಿರ್ಭರ ಭಾರತ‘ದ ಅಡಿಯಲ್ಲಿ ವಿವಿಧ ಕೃಷಿ ಚಟುವಟಿಕೆಗಳಿಗೆ ಸೌಲಭ್ಯ ಒದಗಿಸಲು ನಾಲ್ಕು ವಿಭಾಗಗಳಲ್ಲಿ ₹39,300 ಕೋಟಿ ವೆಚ್ಚದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಪ್ರಜಾವಾಣಿ‘ಗೆ ಸಂದರ್ಶನ ನೀಡಿರುವ ಅವರು, ’ನಮ್ಮ ರಾಜ್ಯ ಸಹಕಾರ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲೇ ಒಳ್ಳೆಯ ಹೆಸರು ಪಡೆದಿದೆ. ಕೃಷಿ ಸಾಲ, ಪಟ್ಟಣ ಸಹಕಾರ ಬ್ಯಾಂಕಿಂಗ್, ಹೈನೋದ್ಯಮದಲ್ಲಿ ಉತ್ತಮ ಸಾಧನೆ ಮಾಡಿದೆ. 43 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು, 2.30 ಕೋಟಿಗೂ ಹೆಚ್ಚು ಸದಸ್ಯರಿರುವ ನಮ್ಮ ರಾಜ್ಯದ ಸಹಕಾರಿ ವ್ಯವಸ್ಥೆಯನ್ನು ಸಮಗ್ರ ಬೆಳವಣಿಗೆಯತ್ತ ಕೊಂಡೊಯ್ಯಬೇಕು ಎಂಬ ಸಂಕಲ್ಪ ಮಾಡಿದ್ದೇನೆ’ ಎಂದರು.

* ಸಹಕಾರ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಯಾವೆಲ್ಲ ಕ್ರಮ ಕೈಗೊಂಡಿದ್ದೀರಿ?

ADVERTISEMENT

ಸಹಕಾರ ಚಳವಳಿಯ ಸಮಗ್ರ ಬೆಳವಣಿಗೆ ಕ್ರಮ ಕೈಗೊಳ್ಳಲು ‌ಹಿರಿಯ ಸಹಕಾರಿಗಳ ಸಭೆ ಕರೆದು ಅವರ ಸಲಹೆಗಳನ್ನು ಪಡೆಯಲಿದ್ದೇನೆ. ರಾಜ್ಯದ ಪ್ರತಿಯೊಬ್ಬರಿಗೂ ಸಹಕಾರ ವ್ಯವಸ್ಥೆಯ ಪ್ರಯೋಜನ ತಲುಪಲು ಕ್ರಮ ಕೈಗೊಳ್ಳಲಾಗುತ್ತಿದೆ. ಆರ್ಥಿಕ ದುರ್ಬಲರ, ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸಹಕಾರಿ ಕಾನೂನಿಗೆ ತಿದ್ದುಪಡಿ ತರುವ ಚಿಂತನೆ ಇದೆ. ಯಾವ್ಯಾವ ಕಲಂಗಳಿಗೆ ತಿದ್ದುಪಡಿ ಆಗಬೇಕು ಎಂಬ ಬಗ್ಗೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.

* ಸಹಕಾರ ವಿಶ್ವವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಇದೆಯಲ್ಲ?

ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಹಿಂದೆ ಪ್ರಯತ್ನ ನಡೆದಿತ್ತು. ಈಗ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಸಹಕಾರ ವಿಶ್ವವಿದ್ಯಾಲಯ ಸ್ಥಾ‍ಪನೆಗೆ ಹೆಜ್ಜೆ ಇಡಲಾಗುವುದು. ಸಹಕಾರ ವ್ಯವಸ್ಥೆಯಲ್ಲಿ ಸಂಶೋಧನೆಗಳು ನಡೆಯಬೇಕು. ಆ ದಿಸೆಯಲ್ಲಿ ಕೂಡ ವ್ಯಾಪಕ ಚರ್ಚೆ, ಸಮಾಲೋಚನೆಗಳನ್ನು ನಡೆಸಲಾಗುವುದು. ಶಾಲಾ ಪಠ್ಯದಲ್ಲಿ ಸಹಕಾರ ವಿಷಯಗಳನ್ನು ಅಳವಡಿಸುವಂತೆ ಶಿಕ್ಷಣ ಸಚಿವರನ್ನು ಕೋರಿದ್ದೇನೆ. ಸದ್ಯದಲ್ಲೇ ಸಹಕಾರ ಪಠ್ಯ ಸೇರ್ಪಡೆಯಾಗಲಿದೆ.

* ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್‌ ವಿಧಿಸಿದ್ದರಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಕೈಗೊಂಡ ಕ್ರಮಗಳೇನು?

ರೈತರ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸುತ್ತಿದ್ದ ಸಂದರ್ಭದಲ್ಲೇ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿ ಜನರು ಸಂಕಷ್ಟಕ್ಕೆ ಒಳಗಾದರು. ಆರ್ಥಿಕ ಸ್ಥಿತಿ ಡೋಲಾಯಮಾನವಾಯಿತು. ಜನರಿಗೆ ನೆರವಾಗಲು ಮುಖ್ಯಮಂತ್ರಿಯವರು ಕೊರೊನಾ ಪರಿಹಾರ ನಿಧಿ ಸ್ಥಾಪಿಸಿದರು.

ಇಲಾಖೆಯ ವತಿಯಿಂದ ಸಹಕಾರ ಸಂಸ್ಥೆಗಳಿಂದ ₹53 ಕೋಟಿ ಸಂಗ್ರಹಿಸಿ ಪರಿಹಾರ ನಿಧಿಗೆ ನೀಡಲಾಯಿತು. ಆಶಾ ಕಾರ್ಯಕರ್ತೆಯರಿಗೆ ತಲಾ ₹3 ಸಾವಿರ ಪ್ರೋತ್ಸಾಹಧನ ನೀಡಲಾಯಿತು. 42,524 ಮಹಿಳೆಯರಿಗೆ ₹12.75 ಕೋಟಿ ಪ್ರೋತ್ಸಾಹಧನ ವಿತರಿಸಲಾಯಿತು.

* ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಬಲವರ್ಧನೆ ಹೇಗೆ?

ಇತ್ತೀಚಿನ ದಿನಗಳಲ್ಲಿ ಬಹುತೇಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಬಹುತೇಕ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಕಾರ್ಯಕ್ಷಮತೆ ಅವಲೋಕಿಸಿದ್ದೇನೆ. ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ರೈತರ ಎಲ್ಲ ಅಗತ್ಯಗಳನ್ನು ಜಿಲ್ಲಾ ಸಹಕಾರ ಬ್ಯಾಂಕ್‌ಗಳು ಪೂರೈಸಬೇಕು. ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.