ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷಾ ವಿಷಯ ಬೋಧನೆಗೆ ವಾರಕ್ಕೆ ನಾಲ್ಕು ಗಂಟೆ ಅವಧಿ ಮೀಸಲಿಡಲು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಸೂಚನೆ ನೀಡಿದ್ದಾರೆ.
ಈ ಕುರಿತು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಸಿಬಿಎಸ್‌ಇ ನೀತಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಶಿಫಾರಸಿನಂತೆ ಭಾಷಾ ವಿಷಯಗಳ ಬೋಧನಾ ಅವಧಿ ಕಡಿಮೆ ಮಾಡಲಾಗಿತ್ತು. ಕನ್ನಡಿಗರ ಒತ್ತಡದ ನಂತರ ನಾಲ್ಕು ಗಂಟೆಗಳಿಗೆ ಹೆಚ್ಚಿಸಲಾಯಿತು. ಭಾಷಾ ಕಲಿಕೆಗೆ ಮೊದಲ ನಾಲ್ಕು ಸೆಮಿಸ್ಟರ್‌ನಲ್ಲಿ ನಾಲ್ಕು ಗಂಟೆಗಳ ಅವಧಿ ಮೀಸಲಿಡಲು ಸ್ಪಷ್ಟ ಸೂಚನೆ ನೀಡಿದ್ದರೂ, ಕೆಲ ವಿಶ್ವವಿದ್ಯಾಲಯಗಳು ಪಾಲಿಸಿಲ್ಲ. ಹಾಗಾಗಿ, ಕಡ್ಡಾಯವಾಗಿ ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದೇನೆ’ ಎಂದು ವಿವರಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಪರ್ಯಾಯವಾಗಿ ರೂಪಿಸುತ್ತಿರುವ ರಾಜ್ಯ ಶಿಕ್ಷಣ ನೀತಿಯಲ್ಲೂ (ಎಸ್‌ಇಪಿ) ಕನ್ನಡಕ್ಕೆ ಅನ್ಯಾಯವಾಗುತ್ತಿದೆ. ಕೆಲ ವಿಶ್ವವಿದ್ಯಾಲಯಗಳು ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳಿಗೆ ವಾರಕ್ಕೆ ಮೂರು ಗಂಟೆ ಬೋಧನಾ ಅವಧಿ ನಿಗದಿ ಮಾಡಿರುವುದು ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿ ಬರಗೂರು ಅವರು ಎರಡು ದಿನಗಳ ಹಿಂದೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.