ADVERTISEMENT

ಕೆಲಸ ಸುಸೂತ್ರವಾಗಿದೆ: ಶಾ, ಧರ್ಮೇಂದ್ರ ಪ್ರಧಾನ್ ಭೇಟಿ ಬಳಿಕ ಸೋಮಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 1:31 IST
Last Updated 16 ಮಾರ್ಚ್ 2023, 1:31 IST
ವಿ.ಸೋಮಣ್ಣ
ವಿ.ಸೋಮಣ್ಣ   

ನವದೆಹಲಿ: ಕರ್ನಾಟಕದ ವಸತಿ ಸಚಿವ ವಿ.ಸೋಮಣ್ಣ ಅವರು ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಕೇಂದ್ರ ನಾಯಕರ ಭೇಟಿಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸೋಮಣ್ಣ, ‘ನನ್ನ ಕೆಲಸ ಸುಸೂತ್ರವಾಗಿ ಆಗಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ಬಿಜೆಪಿಯ ನಾಯಕರ ಜತೆಗೆ ಮುನಿಸಿಕೊಂಡಿರುವ ಸೋಮಣ್ಣ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ವಾರದಿಂದಲೂ ಪ್ರಯತ್ನಿಸಿದ್ದರು. ಅಮಿತ್‌ ಶಾ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ನವದೆಹಲಿಗೆ ಬುಧವಾರ ಬಂದಿದ್ದರು. ಆದರೆ, ಗೃಹ ಸಚಿವರನ್ನು ಭೇಟಿ ಮಾಡಲು ಅವರಿಗೆ ಬೆಳಿಗ್ಗೆ ಸಾಧ್ಯವಾಗಲಿಲ್ಲ.

ADVERTISEMENT

ಈ ನಡುವೆ, ಸೋಮಣ್ಣ ಜತೆಗೆ ಮಾತುಕತೆ ನಡೆಸಿ ಮುನಿಸು ಶಮನಗೊಳಿಸುವಂತೆ ಧರ್ಮೇಂದ್ರ ಪ್ರಧಾನ್‌ ಹಾಗೂ ಅರುಣ್ ಸಿಂಗ್ ಅವರಿಗೆ ಅಮಿತ್‌ ಶಾ ಸೂಚಿಸಿದರು. ಬಳಿಕ ಸಂಸತ್‌ ಭವನದಲ್ಲಿ ಸೋಮಣ್ಣ ಜತೆಗೆ ಉಭಯ ನಾಯಕರು ಮಾತುಕತೆ ನಡೆಸಿದರು. ಈ ವೇಳೆಗೆ, ಕೇಂದ್ರ ಸಚಿವ ‍ಪ್ರಲ್ಹಾದ ಜೋಶಿ ಇದ್ದರು. ಸೋಮಣ್ಣ ಅವರು ಸಂಜೆ ಮತ್ತೊಮ್ಮೆ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅಮಿತ್‌ ಶಾ ಅವರ ಜೊತೆಗೂ ಮಾತನಾಡಿದರು. ಯಾವುದೇ ದುಡುಕಿನ ತೀರ್ಮಾನ ತೆಗೆದುಕೊಳ್ಳದಂತೆ ಕೇಂದ್ರ ನಾಯಕರು ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಭೇಟಿಗೆ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಸೋಮಣ್ಣ, ‘ನಾಲ್ಕು ವರ್ಷಗಳಿಂದ ಸಚಿವನಾಗಿದ್ದೇನೆ. ಈ ಅವಧಿಯಲ್ಲಿ ಎರಡನೇ ಸಲ ದೆಹಲಿಗೆ ಬಂದಿದ್ದೇನೆ. ಇಲಾಖೆಯ ಕಾರ್ಯ ನಿಮಿತ್ತ ಬಂದಿದ್ದೇನೆ’ ಎಂದು ಅವರು ಹೇಳಿದರು.

‘45 ವರ್ಷಗಳಿಂದ ಹೋರಾಟದ ಮನೋಭಾವದಿಂದ ಬಂದವನು. ಸುಳ್ಳು ಅಳವಡಿಸಿಕೊಂಡವನು ಅಲ್ಲ. ನನ್ನದೇ ಆದ ವ್ಯವಸ್ಥೆಯಲ್ಲಿ ವ್ಯಾಮೋಹ ಇಲ್ಲದೆ ಬದುಕಿದವನು. ನನ್ನ ಜೀವನ ತೆರೆದ ಪುಸ್ತಕ’ ಎಂದರು.

‘ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಆ ಪಕ್ಷದಲ್ಲಿ ಶಕ್ತಿಯಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಸೇವೆ ಮಾಡಲು ಅವಕಾಶ ಕೊಟ್ಟಿದೆ. ನಾನು ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಈ ಸಲ ಟಿಕೆಟ್‌ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಪಕ್ಷದ ಕೆಲಸ ಮಾಡುತ್ತೇನೆ. ನಾನು ನನ್ನ ಇತಿಮಿತಿಯಲ್ಲಿ ಬದುಕಿದವನು. ಯಾರ ಹಂಗಿನಲ್ಲೂ ಬದುಕಿಲ್ಲ, ಬದುಕುವುದೂ ಇಲ್ಲ’ ಎಂದು ಅವರು ಹೇಳಿದರು.

‘ವಿಜಯೇಂದ್ರ ವಿರುದ್ಧ ದೂರು ಕೊಟ್ಟು ನನಗೆ ಏನಾಗಬೇಕಿದೆ?‘
‘ಬಿ.ವೈ. ವಿಜಯೇಂದ್ರ ಯಾರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಗ. ಅವನ ವಿರುದ್ಧ ದೂರು ಕೊಟ್ಟು ನನಗೆ ಏನಾಗಬೇಕಿದೆ’ ಎಂದು ವಿ.ಸೋಮಣ್ಣ ಪ್ರಶ್ನಿಸಿದರು.

‘ನನಗೆ 72 ವರ್ಷ. ವಿಜಯೇಂದ್ರನಿಗೆ 45–46 ವರ್ಷ. ನನಗೆ ಅವನಿಗಿಂತ ದೊಡ್ಡ ವಯಸ್ಸಿನ ಮಗ ಇದ್ದಾನೆ. ದೂರು ನೀಡುವ ಅವಶ್ಯಕತೆಯೂ ನನಗಿಲ್ಲ. ಇದು ಯಾರದೋ ಸೃಷ್ಟಿ. ಅವರಿಗೆ ಏನು ದುರಂತ ಬಂದಿದೆಯೋ ಗೊತ್ತಿಲ್ಲ. ಯಾರನ್ನೂ ತೇಜೋವಧೆ ಮಾಡುವುದು ಸರಿಯಲ್ಲ’ ಎಂದು ಅವರು ಹೇಳಿದರು.

‘ಅವರವರ ಅದೃಷ್ಟ ನಡೆದುಕೊಂಡು ಹೋಗುತ್ತಾರೆ. ನನ್ನ ಬಳಿಯೂ ಸಾವಿರಾರು ಜನರು ಇದ್ದಾರೆ. ಮಾಜಿ ಮುಖ್ಯಮಂತ್ರಿ ಮಗ ಎಂಬುದು ಬಿಟ್ಟರೆ ಬೇರೇನೂ ಅಲ್ಲ. ಅವರು ನಮ್ಮನ್ನು ಯಾವ ರೀತಿ ಕಾಣುತ್ತಾರೋ ಗೊತ್ತಿಲ್ಲ. ಕ್ಷುಲ್ಲಕ ವಿಚಾರಗಳನ್ನು ಮಾತನಾಡುವುದಿಲ್ಲ’ ಎಂದರು.

ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ಟೀಕಾಪ್ರಹಾರ ನಡೆಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಏಕವಚನದಲ್ಲಿ ಮಾತನಾಡಿರುವುದು ನನಗೆ ಗೊತ್ತಿಲ್ಲ. ಬಿಸಿ ರಕ್ತದ ಹುಡುಗರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ’ ಎಂದರು. ‘ಅವನು ಹಂಗೆ ಅನ್ನಬೇಕಾದರೆ ಇವನಲ್ಲಿ ಏನಿದೆ ಅಂತ ಅವನನ್ನೇ ಕೇಳಿ’ ಎಂದೂ ಹೇಳಿದರು.

ಸಿ.ಟಿ.ರವಿ ಮತ್ತು ಬಿ.ವೈ.ವಿಜಯೇಂದ್ರ ವಾದ–ಪ್ರತಿವಾದ
ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮೇಲೆ ಹರಿಹಾಯ್ದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಬಿ.ವೈ.ವಿಜಯೇಂದ್ರ ಮಧ್ಯೆ, ಟಿಕೆಟ್‌ ವಿಚಾರವಾಗಿ ವಾದ–ಪ್ರತಿವಾದ ನಡೆದಿದೆ.

ವಿಜಯೇಂದ್ರ ಅವರಿಗೆ ನೀಡುವ ಟಿಕೆಟ್‌ ವಿಚಾರದಲ್ಲಿ ವಿಜಯಪುರದಲ್ಲಿ ಸುದ್ದಿಗಾರರು ಮಂಗಳವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ‘ನಮ್ಮಲ್ಲಿ ಟಿಕೆಟ್‌ ನೀಡುವಾಗ ಕಿಚನ್ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆಗುವುದಿಲ್ಲ. ಸಂಸದೀಯ ಮಂಡಳಿಯಲ್ಲಿ ತೀರ್ಮಾನ
ವಾಗುತ್ತದೆ. ನಾಯಕರ ಮಕ್ಕಳೆಂಬ ಒಂದೇ ಕಾರಣಕ್ಕೆ ಟಿಕೆಟ್‌ ಸಿಗುವುದಿಲ್ಲ’ ಎಂದಿದ್ದರು.

‘ನೀವು ವಿಜಯೇಂದ್ರ ಅವರ ಬಗ್ಗೆ ಕೇಳಿದ್ದೀರಿ. ಅವರಿಗೂ ಟಿಕೆಟ್‌ ನೀಡುವ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಸಮೀಕ್ಷೆಯ ಆಧಾರದ ಮೇಲೆ ಗೆಲ್ಲುವ ಮಾನದಂಡ ಆಧರಿಸಿದ ಟಿಕೆಟ್‌ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಕುಟುಂಬದಲ್ಲಿ ಸಮೀಕ್ಷೆ ನಡೆಯುವುದಿಲ್ಲ’ ಎಂದು ಹೇಳಿದ್ದರು.

ಇದಕ್ಕೆ ಮಂಗಳವಾರ ರಾತ್ರಿಯೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಮುಂಬರುವ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡುವ ವಿಚಾರ ಬಿಎಸ್‌ವೈ ಕಿಚನ್‌ನಲ್ಲಿ ನಿರ್ಧಾರವಾಗುವುದಿಲ್ಲ. ಇನ್ನೊಬ್ಬರ ಕಿಚನ್‌ನಲ್ಲಿಯೂ ಚರ್ಚೆಯಾಗಲ್ಲ’ ಎಂದು ತಿಳಿಸಿದರು.

ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಎಸ್‌.ಟಿ. ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಾಗ ಸುದ್ದಿಗಾರರ ಜತೆ ಮಾತನಾಡಿದರು.

‘ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಸಿ.ಟಿ. ರವಿ ಅವರಿಗಿಂತ ಯಡಿಯೂರಪ್ಪ ಅವರು ಎಷ್ಟು ಹಿರಿಯರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ ಎಂದು ಎಲ್ಲರಿಗೂ ಗೊತ್ತಿದೆ. ನನಗೆ ಟಿಕೆಟ್‌ ಕೊಡುವ ವಿಚಾರವನ್ನು ಮುಂದಿನ ದಿನಗಳಲ್ಲಿ ಪಕ್ಷ ನಿರ್ಧಾರ ಮಾಡುತ್ತದೆ. ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವೆ. ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುವೆ. ಬೇಡವೆಂದರೆ ಸ್ಪರ್ಧೆ ಮಾಡುವುದಿಲ್ಲ’ ಎಂದು ವಿಜಯೇಂದ್ರ ಹೇಳಿದರು.

ತಮ್ಮ ಹೇಳಿಕೆಯು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸಮಜಾಯಿಷಿ ನೀಡಿರುವ ಸಿ.ಟಿ.ರವಿ, ‘ನಾನು ಬಿ.ವೈ.ವಿಜಯೇಂದ್ರ ಅವರನ್ನು ಉದ್ದೇಶಿಸಿ ಈ ಮಾತು ಹೇಳಿಲ್ಲ. ನಮ್ಮಲ್ಲಿ ಟಿಕೆಟ್‌ ಬಗ್ಗೆ ಸಂಸದೀಯ ಮಂಡಳಿ ನಿರ್ಧರಿಸುತ್ತದೆ. ಕಿಚನ್‌ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸುವುದಿಲ್ಲ. ಜೆಡಿಎಸ್‌ ಪಕ್ಷದಲ್ಲಿ ತೀರ್ಮಾನ ಆಗುವುದು ಅವರ ಕುಟುಂಬದ ಕಿಚನ್‌ನಲ್ಲಿ ಅಲ್ಲವೇ? ಆದರೆ, ನಮ್ಮಲ್ಲಿ ಆ ರೀತಿ ನಡೆಯುವುದಿಲ್ಲ’ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.