ADVERTISEMENT

ಬರ ಪರಿಸ್ಥಿತಿ ನಿರ್ವಹಣೆಗೆ ಸಣ್ಣ ನೀರಾವರಿ ಇಲಾಖೆ ಸಜ್ಜು- ಎನ್.ಎಸ್. ಬೋಸರಾಜು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 15:34 IST
Last Updated 31 ಆಗಸ್ಟ್ 2023, 15:34 IST
ಎನ್ ಎಸ್ ಬೋಸರಾಜು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ
ಎನ್ ಎಸ್ ಬೋಸರಾಜು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ   

ಬೆಂಗಳೂರು: ‘ಬರ ಪರಿಸ್ಥಿತಿ ನಿಭಾಯಿಸಲು ಸಣ್ಣ ನೀರಾವರಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿಯಂಥ ಯೋಜನೆಗಳಿಂದ ಬಯಲು ಸೀಮೆಯ 164 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ 2017-18ರಲ್ಲಿ ಆರನೇ ನೀರಾವರಿ ಗಣತಿಯ ಸಮೀಕ್ಷೆ ನಡೆಸಿದಾಗ ರಾಜ್ಯದಲ್ಲಿ ಬರ ಇತ್ತು. ನಂತರದ ವರ್ಷಗಳಲ್ಲಿ ಕೆರೆಗಳನ್ನು ತುಂಬುವ ಏತ ನೀರಾವರಿಯ ಯೋಜನೆಗಳಿಂದ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿದೆ’ ಎಂದರು.

‘2022 -23ನೇ ಸಾಲಿನ ಏಳನೇನೀರಾವರಿ ಗಣತಿ ಕಾರ್ಯವು ಸದ್ಯದಲ್ಲೇ ಆರಂಭವಾಗಲಿದೆ. ಅದರಲ್ಲಿ ಉತ್ತಮ ಸಾಧನೆ ವ್ಯಕ್ತವಾಗುವ ನಿರೀಕ್ಷೆಯಿದೆ’ ಎಂದರು.

‘ಇಲಾಖೆಯ ವ್ಯಾಪ್ತಿಯಲ್ಲಿ 3,673 ಕೆರೆಗಳಿವೆ. ಏತ ನೀರಾವರಿ ಯೋಜನೆಗಳ ಮೂಲಕ ಅವುಗಳನ್ನು ತುಂಬಿಸುವ ಕಾರ್ಯ ನಡೆಯುತ್ತದೆ. ಈ ಬಾರಿ ಕಡಿಮೆ ಮಳೆಯಾಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಲ್ಲಿ ನೀರು ತುಂಬಿಲ್ಲ. 334 (ಶೇ9) ಕೆರೆಗಳಲ್ಲಿ ಶೇ 30ಕ್ಕೂ ಕಡಿಮೆ ನೀರು ಸಂಗ್ರಹವಿದೆ’ ಎಂದರು.

ADVERTISEMENT

‘ಕೆರೆಗಳಲ್ಲಿ ನೀರು ಸಂಗ್ರಹಿಸಿ ಬರ ಪರಿಸ್ಥಿತಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ವ್ಯಾಪ್ತಿಯ ಕೆರೆಗಳ ತೂಬುಗಳಿಂದ ಕೃಷಿ ಚಟುವಟಿಕೆಗೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.