ADVERTISEMENT

ಹೊಸ ವರ್ಷದ ಸಂಭ್ರಮಾಚರಣೆಗೆ ಗುಂಡು ಹಾರಿಸಿದ ವ್ಯಕ್ತಿ ಹೃದಯಾಘಾತದಿಂದ ಸಾವು!

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಗುರಿತಪ್ಪಿದ ಏರ್‌ಗನ್‌; ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 10:27 IST
Last Updated 1 ಜನವರಿ 2023, 10:27 IST
   

ಶಿವಮೊಗ್ಗ: ಏರ್‌ಗನ್‌ ಮೂಲಕ ಗುಂಡು ಹಾರಿಸಿ ಹೊಸ ವರ್ಷವನ್ನು ಸಂಭ್ರಮಿಸುವ ಧಾವಂತಕ್ಕೆ ನಗರದಲ್ಲಿ ಶನಿವಾರ ರಾತ್ರಿ ಜೀವವೊಂದು ಬಲಿಯಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಇಲ್ಲಿನ ವಿದ್ಯಾನಗರದ 4ನೇ ಕ್ರಾಸ್‌ನಲ್ಲಿರುವ ಗೋಪಾಲ ಗ್ಲಾಸ್‌ಹೌಸ್ ಮಾಲೀಕ ಮಂಜುನಾಥ ಓಲೇಕಾರ ಅವರ ಮನೆಯ ಮಹಡಿಯ ಮೇಲೆ ಹೊಸ ವರ್ಷದ ಸ್ವಾಗತಕ್ಕೆ ಪಾರ್ಟಿ ಆಯೋಜಿಸಲಾಗಿತ್ತು.

ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಹೊಸ ವರ್ಷದ ಸಂಭ್ರಮ ಆಚರಿಸಲು ಮಂಜುನಾಥ್ ಓಲೇಕಾರ ಅವರು ಏರ್‌ಗನ್‌ನಿಂದ ಆಕಾಶದತ್ತ ಗುಂಡು ಹಾರಿಸಿದ್ದು, ಈ ವೇಳೆ ಅದು ಗುರಿ ತಪ್ಪಿ ವಿನಯ್ ಅವರಿಗೆ ತಗುಲಿದೆ. ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಚಾತುರ್ಯದಿಂದ ಆದ ಈ ಘಟನೆಯಿಂದ ಘಾಸಿಗೊಂಡ ಮಂಜುನಾಥ ಓಲೇಕಾರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವ ಸಿದ್ಧತೆಯಲ್ಲಿದ್ದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸ್ಥಳಕ್ಕೆ ಕೋಟಿ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.