ADVERTISEMENT

ಹಾಲು ಖರೀದಿ ದರ ಇಳಿಸುತ್ತಿರುವ ಒಕ್ಕೂಟಗಳು

ಸರ್ಕಾರದಿಂದ ₹345 ಕೋಟಿ ಪ್ರೋತ್ಸಾಹಧನ ಬಾಕಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 2:01 IST
Last Updated 9 ಜುಲೈ 2020, 2:01 IST
  ಕೆಎಂಎಫ್‌
  ಕೆಎಂಎಫ್‌   
""

ಬೆಂಗಳೂರು:ಸರ್ಕಾರ ಮೂರು ತಿಂಗಳಿನಿಂದ ಪ್ರೋತ್ಸಾಹಧನ ನೀಡದಿರುವುದರ ಬೆನ್ನಲ್ಲೇ, ಒಕ್ಕೂಟಗಳು ಹಾಲಿನ ಖರೀದಿ ದರವನ್ನು ಇಳಿಕೆ ಮಾಡುತ್ತಿರುವುದರಿಂದ ಉತ್ಪಾದಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟ ನಂತರ ನಂದಿನಿ ಹಾಲು ಮತ್ತು ಉಪ ಉತ್ಪನ್ನಗಳ ಮಾರಾಟ ಪ್ರಮಾಣ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮ ರೈತರ ಮೇಲೂ ಆಗಿದೆ.

ಧಾರವಾಡ ಹಾಲು ಒಕ್ಕೂಟ ಬಿಟ್ಟರೆ ಉಳಿದ 13 ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹2ರಿಂದ ₹5 ತನಕ ಕಡಿಮೆ ಮಾಡಿವೆ. ಇನ್ನೊಂದೆಡೆ ಲೀಟರ್‌ಗೆ ₹5 ಪ್ರೋತ್ಸಾಹಧನ ನೀಡುತ್ತಿದ್ದ ಸರ್ಕಾರ, ₹345 ಕೋಟಿ ಬಾಕಿ ಉಳಿಸಿಕೊಂಡಿದೆ.

ADVERTISEMENT

‌ಕೆಎಂಎಫ್‌‌ ಇತಿಹಾಸದಲ್ಲೇ ಹಾಲಿನ ಉತ್ಪಾದನೆ ಅತ್ಯಂತ ಹೆಚ್ಚಳವಾಗಿದೆ. ಸಂಗ್ರಹವಾದ ಹಾಲಿನಲ್ಲಿ ದಿನಕ್ಕೆ 35 ಲಕ್ಷ ಲೀಟರ್ ಉಳಿಯುತ್ತಿದ್ದು, ಇದನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಹಾಲಿನ ಪುಡಿಗೂ ಈಗ ಮಾರುಕಟ್ಟೆ ಇಲ್ಲ. ಮುಂಬೈ, ಹೈದರಾಬಾದ್ ಸೇರಿ ನೆರೆ ರಾಜ್ಯದ ದೊಡ್ಡ ನಗರಗಳಲ್ಲಿ ಹಾಲಿನ ಪುಡಿಗೆ ಇದ್ದ ಬೇಡಿಕೆ ಕೊರೊನಾ ಕಾರಣ ಸಂಪೂರ್ಣ ಕುಸಿದಿದೆ. 1 ಕೆ.ಜಿ ಹಾಲಿನ ಪುಡಿಗೆ ₹260 ಇದ್ದ ದರ ಈಗ ₹130ಕ್ಕೆ ಇಳಿದಿದೆ.

‘ಈ ದರದಲ್ಲಿ ಪುಡಿ ಮಾರಾಟ ಮಾಡಿದರೆಲೀಟರ್‌ಗೆ ₹8ರಿಂದ ₹10 ನಷ್ಟವಾಗಲಿದೆ. ಆದ್ದರಿಂದ ಮಾರಾಟ ಮಾಡದೆ ದಾಸ್ತಾನು ಮಾಡಲಾಗುತ್ತಿದೆ’ ಎಂದು ಕೆಎಂಎ‍ಫ್‌ ಅಧಿಕಾರಿಗಳು ಹೇಳುತ್ತಾರೆ.

ನಷ್ಟ ಸರಿದೂಗಿಸಿಕೊಳ್ಳಲು ಹಾಲಿನ ಖರೀದಿ ದರ ಕಡಿಮೆ ಮಾಡಬೇಕಾಗಿದೆ. ಹಾಲಿನ ಪುಡಿ ದರ ಏರಿಕೆಯಾಗದಿದ್ದರೆ ರೈತರಿಗೆ ಲೀಟರ್‌ ಹಾಲಿಗೆ ನೀಡುತ್ತಿರುವ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡಬೇಕಾಗುತ್ತದೆ ಎಂಬುದು ಅಧಿಕಾರಿಗಳು ಅಭಿಪ್ರಾಯ.

ಈ ನಷ್ಟದ ಜತೆಗೆ ರೈತರಿಗೆ ಸಿಗಬೇಕಾದ ಪ್ರೋತ್ಸಾಹಧನ ಕೂಡ ಸಿಕ್ಕಿಲ್ಲ. ಲೀಟರ್‌ಗೆ ₹5ರಂತೆ ತಿಂಗಳಿಗೆ ಸರಾಸರಿ ₹115 ಕೋಟಿ ಪ್ರೋತ್ಸಾಹಧನವನ್ನು ಸರ್ಕಾರ ನೀಡಬೇಕಿದೆ. ‘ಸರ್ಕಾರ ಬಿಡುಗಡೆ ಮಾಡಿದಾಗ ರೈತರಿಗೆ ವರ್ಗಾಯಿಸಲಾಗುವುದು’ ಎನ್ನುತ್ತಾರೆ ಕೆಎಂಎಫ್ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.