ADVERTISEMENT

ಆರ್‌ಟಿಇ ಬಲಪಡಿಸಲು ಅರವಿಂದ ಬೆಲ್ಲದ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 20:21 IST
Last Updated 21 ಮಾರ್ಚ್ 2022, 20:21 IST

ಬೆಂಗಳೂರು: ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕವನ್ನು ತಗ್ಗಿಸಲು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಬಿಜೆಪಿಯ ಅರವಿಂದ ಬೆಲ್ಲದ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಆರ್‌ಟಿಇ ಕಾಯ್ದೆ ಒಂದು ಅತ್ಯುತ್ತಮವಾದ ಕಾನೂನು. ದೇಶದಲ್ಲಿ ಮೀಸಲಾತಿ ಬಳಿಕ ಜನರಿಗೆ ಲಭಿಸಿದ ಮಹತ್ವಪೂರ್ಣವಾದ ಕಾನೂನು. ಈ ಕಾನೂನನ್ನು ದುರ್ಬಲಗೊಳಿಸುವ ಪ್ರಯತ್ನ ಸಲ್ಲದು’ ಎಂದರು.

ಶ್ರೀಮಂತರ ಮಕ್ಕಳು ಕಲಿಯುವ ಶಾಲೆಗಳಲ್ಲೇ ಬಡವರ ಮಕ್ಕಳೂ ಕಲಿಯಲು ಆರ್‌ಟಿಇ ಕಾಯ್ದೆಯಿಂದ ಸಾಧ್ಯ. ಆದರೆ, ಆಯಾ ವಾರ್ಡ್‌ಗಳಲ್ಲಿ ಸರ್ಕಾರಿ ಶಾಲೆಗಳಿದ್ದರೆ ಅರ್ಜಿ ಸಲ್ಲಿಸುವಂತಿಲ್ಲ ಎಂಬ ತಿದ್ದುಪಡಿಯಿಂದ ಈ ಕಾಯ್ದೆಯ ಮೂಲ ಆಶಯಕ್ಕೆ ಹಿನ್ನಡೆಯಾಗಿದೆ. ತಕ್ಷಣವೇ ಈ ತಿದ್ದುಪಡಿಯನ್ನು ರದ್ದುಗೊಳಿಸಿ ಮೂಲ ಸ್ವರೂಪದಲ್ಲೇ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಾಲೆಗಳ ವಿಲೀನಕ್ಕೆ ಸಲಹೆ: ವೆಚ್ಚ ಕಡಿತದ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳನ್ನು ವಿಲೀನಗೊಳಿಸಬೇಕು. ಕನ್ನಡ– ಉರ್ದು ಶಾಲೆಗಳು ಅಥವಾ ಇತರ ಮಾಧ್ಯಮ ಶಾಲೆಗಳನ್ನೂ ವಿಲೀನಗೊಳಿಸಬೇಕು. ಎಲ್ಲರೂ ಕೂಡಿ ಕಲಿಯುವ ವಾತಾವರಣ ನಿರ್ಮಿಸುವುದರ ಜತೆಗೆ ಹಣವನ್ನೂ ಉಳಿಸಬಹುದು ಎಂದು ಬೆಲ್ಲದ ಸಲಹೆ ನೀಡಿದರು.

ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಬಡವರಿಗೆ ಒದಗಿಸುವ ಮನೆಗಳ ವಿಸ್ತೀರ್ಣ ಹೆಚ್ಚಿಸಬೇಕು. ಎಲ್ಲ ಇಲಾಖೆಗಳಲ್ಲೂ ಕಡತಗಳ ಚಲನೆಯ ಹಂತವನ್ನು ಕಡಿಮೆ ಮಾಡುವ ಮೂಲಕ ವಿಳಂಬ ಹಾಗೂ ಭ್ರಷ್ಟಾಚಾರ ತಪ್ಪಿಸಬೇಕು ಎಂದರು.

ತಾರತಮ್ಯ ನಿವಾರಣೆಗೆ ಆಗ್ರಹ: ಕಾಂಗ್ರೆಸ್‌ನ ಬಸನಗೌಡ ದದ್ದಲ್‌ ಮಾತನಾಡಿ, ‘ಈ ಬಾರಿ ಬಿಜೆಪಿಯ ಶಾಸಕರ ಕ್ಷೇತ್ರಗಳಿಗಷ್ಟೇ ಅನುದಾನ ಹಂಚಿಕೆ ಮಾಡಲಾಗಿದೆ. ಈ ರೀತಿಯ ತಾರತಮ್ಯ ಮಾಡಿದರೆ ವಿರೋಧ ಪಕ್ಷಗಳ ಸದಸ್ಯರು ಪ್ರತಿನಿಧಿಸುವ ಕ್ಷೇತ್ರಗಳ ಜನರು ಯಾರನ್ನು ಕೇಳಬೇಕು’ ಎಂದು ಪ್ರಶ್ನಿಸಿದರು.

‘ಶಾಸಕರ ಶಿಫಾರಸು ಆಧರಿಸಿ ಅನುದಾನ ಬಿಡುಗಡೆ ಮಾಡುವ ಪದ್ಧತಿ ಈವರೆಗೂ ಇತ್ತು. ಈಗ ಬಿಜೆಪಿ ಕಾರ್ಯಕರ್ತರ ಶಿಫಾರಸು ಪಡೆದು ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಮನೆ ಬಾಗಿಲಿಗೆ ಯೋಜನೆ ತನ್ನಿ’: ಜೆಡಿಎಸ್‌ನ ಡಾ.ಕೆ. ಅನ್ನದಾನಿ ಮಾತನಾಡಿ, ‘ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಅದೇ ಮಾದರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ಯೋಜನೆಗಳನ್ನೂ ಜನರ ಮನೆ ಬಾಗಿಲಿಗೆ ತಲುಪಿಸಿ’ ಎಂದು ಒತ್ತಾಯಿಸಿದರು.

ಸಚಿವರ ಗೈರಿಗೆ ಸಿದ್ದರಾಮಯ್ಯ ಆಕ್ಷೇಪ
ವಿಧಾನಸಭೆಯಲ್ಲಿ ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆ ನಡೆಯುತ್ತಿದ್ದಾಗ ಸಚಿವರ ಸಾಲಿನಲ್ಲಿ ವಿ. ಸುನೀಲ್‌ ಕುಮಾರ್‌ ಮಾತ್ರ ಇದ್ದರು. ಸಚಿವರು ಸದನಕ್ಕೆ ಗೈರಾಗಿರುವುದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಇದು ಬಜೆಟ್‌ ಅಧಿವೇಶನ. ಸಚಿವರು ಉತ್ತರ ಕೊಡುವವರು. ಅವರಿಗೆ ಗಂಭೀರತೆ ಬೇಕು. ಆ ಕಡೆ ಬಿ.ಎಸ್‌. ಯಡಿಯೂರಪ್ಪ ಮಾತ್ರ ಜವಾಬ್ದಾರಿಯಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಅವರನ್ನೇ ಮುಂದೆ ಕರೆದು ಕೂರಿಸಿ’ ಎಂದರು.

ಅಷ್ಟರಲ್ಲೇ ಆರ್‌. ಅಶೋಕ, ಎಸ್‌. ಅಂಗಾರ, ಬೈರತಿ ಬಸವರಾಜ, ಎಸ್‌.ಟಿ. ಸೋಮಶೇಖರ್‌, ಆರಗ ಜ್ಞಾನೇಂದ್ರ ಸದನಕ್ಕೆ ಬಂದರು. ಕಲಾಪಕ್ಕೆ ಗೈರಾಗದಂತೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.