ADVERTISEMENT

ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ನೋಟಿಸ್‌

ಬಿಜೆಪಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 18:58 IST
Last Updated 12 ಫೆಬ್ರುವರಿ 2021, 18:58 IST
   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವುದನ್ನು ಪ್ರಶ್ನಿಸಿ, ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಶಿಸ್ತು ಸಮಿತಿ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

‘ಮುಖ್ಯಮಂತ್ರಿ ವಿರುದ್ಧ ಸದಾ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿ
ದ್ದೀರಿ. ನಿಮಗೆ ಸಮಸ್ಯೆ ಅಥವಾ ಅಸಮಾಧಾನಗಳಿದ್ದರೂ ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು. ಪಕ್ಷ ಮತ್ತು ನಾಯಕರಿಗೆ ಮುಜುಗರ ಉಂಟು ಮಾಡುವ ಹೇಳಿಕೆಗಳು ಪಕ್ಷ ವಿರೋಧಿ ಚಟುವಟಿಕೆಯೇ ಆಗುತ್ತದೆ. ಇದಕ್ಕೆ ಸ್ಪಷ್ಟೀಕರಣ ನೀಡಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಯತ್ನಾಳ್, ‘ನನಗೆ ನೋಟಿಸ್‌ ತಲುಪಿಲ್ಲ. ನೋಟಿಸ್‌ ಬಂದ ಬಳಿಕ ವಿವರವಾಗಿ ಉತ್ತರ ನೀಡುತ್ತೇನೆ. ನಾನು ಸತ್ಯದ ಪರ ಮಾತನಾಡುತ್ತಿದ್ದೇನೆಯೇ ಹೊರತು, ಯಾರ ವಿರುದ್ಧವೂ ಮಾತನಾಡುತ್ತಿಲ್ಲ.
ಯಾವುದಕ್ಕೂ ಅಂಜುವುದಿಲ್ಲ. ಯಾರ ಮುಲಾಜಿನಲ್ಲೂ ಇಲ್ಲ’ ಎಂದು ಹೇಳಿದರು.

ADVERTISEMENT

‘ನಾನು ಎಂದೂ ಸ್ವಾರ್ಥ ರಾಜಕಾರಣ ಮಾಡಿದವನಲ್ಲ. ಮೋದಿ ಮತ್ತು ಅಮಿತ್ ಶಾ ಅವರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಟೀಕೆ ಮಾಡುತ್ತಿದ್ದೇನೆ. ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ಯಾವ ನಾಯಕರ ವಿರುದ್ಧವೂ ಮಾತನಾಡಿಲ್ಲ, ಬೇರೆ ಪಕ್ಷದವರ ಜತೆ ಕೈಜೋಡಿಸಿಲ್ಲ. ನಾನು ಇಲ್ಲಿಯವರೆಗೆ ಕ್ಷಮೆ ಕೇಳಿಲ್ಲ, ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಹೇಳಬೇಕಾಗಿದ್ದನ್ನು ಹೇಳಿದ್ದೇನೆ. ಅಗತ್ಯ ಬಿದ್ದರೆ ಪ್ರಧಾನಿಯವರ ಗಮನಕ್ಕೆ ತರಲೂ ಸಿದ್ಧನಿದ್ದೇನೆ’ ಎಂದು ಯತ್ನಾಳ್ ಹೇಳಿದರು.

‘ಕ್ರಾಂತಿ’ಗೆ ಶಾಸಕರ ಪತ್ರವೇ ಸಾಕ್ಷಿ

‘ಶಾಸಕರ ಭಾವನೆಗಳನ್ನು ಮುಚ್ಚಿಡಲಾಗದು. ಅದೇ ರೀತಿ ಕ್ರಾಂತಿಯನ್ನು ಮುಚ್ಚಿಡಲಾಗದು. ಕ್ರಾಂತಿ ಒಮ್ಮೆಲೆ ಸ್ಫೋಟ ಆಗಲ್ಲ. ಆದರೆ ಕ್ರಾಂತಿ ಆಗೋದು ಖಚಿತ. ಕ್ರಾಂತಿ ಆದ ಬಳಿಕವೇ ಶಾಂತಿ ಉಳಿಯುವುದು. ಈಗಾಗಲೇ ಕೆಲವು ಶಾಸಕರು ಪ್ರಧಾನಿ
ಮೋದಿ ಅವರಿಗೆ ಪತ್ರ ಬರೆದಿರುವುದೇ ಇದಕ್ಕೆ ಸಾಕ್ಷಿ’ ಎಂದು ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು.

***

ಶಾಸಕರಿಗೆ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಬಹಿರಂಗ ಚರ್ಚೆಯ ಔಚಿತ್ಯವೇನಿತ್ತು. ಅದಕ್ಕಾಗಿಯೇ ನೋಟಿಸ್‌ ಕೊಟ್ಟಿದ್ದೇವೆ

- ಅರುಣ್ ಸಿಂಗ್‌, ರಾಜ್ಯ ಬಿಜೆಪಿ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.