ADVERTISEMENT

ಏರ್‌ಬ್ಯಾಗ್‌ ಓಪನ್‌ ಆಗಿ ಗಾಡಿ ನಿಲ್ಲುವವರೆಗೂ ಏನೂ ತಿಳಿದಿರಲಿಲ್ಲ– ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 9:15 IST
Last Updated 19 ಫೆಬ್ರುವರಿ 2019, 9:15 IST
   

ಬೆಂಗಳೂರು: ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಬೆಳಗಿನ ಜಾವ ಹೆದ್ದಾರಿ ಪಕ್ಕ ನಿಂತಿದ್ದ ಕಾರುಗಳಿಗೆ ಡಿಕ್ಕಿಯಾಗಿ ಇಬ್ಬರು ಯುವಕರು ಸಾವಿಗೀಡಾದರು. ಅಪಘಾತದಲ್ಲಿ ರವಿ ಅವರೂ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಅಪಘಾತ ನಡೆದ ನಂತರ ನೆರವಿಗೆ ಬರಲಿಲ್ಲ, ಮೃತ ಪಟ್ಟ ಕುಟುಂಬಗಳಿಗ ಸಾಂತ್ವನ ಹೇಳಿಲ್ಲ, ಗಾಯಗೊಂಡವರನ್ನು ಗಮನಿಸಿಲ್ಲ ಎಂಬ ಆರೋಪಗಳಿಗೆ ಅವರ ಟ್ವಿಟರ್‌ನಲ್ಲಿ ಉತ್ತರ ನೀಡಿದ್ದಾರೆ.

‘ಇಂದು ಬೆಳಗಿನ ಜಾವ ನನ್ನ ಕಾರು ಕುಣಿಗಲ್‌ ಸಮೀಪ ಅಪಘಾತಕ್ಕೀಡಾಯಿತು. ದುರದೃಷ್ಟವಶಾತ್‌ ದುರ್ಘಟನೆಯಲ್ಲಿ ಇಬ್ಬರು ಸಾವಿಗೀಡಾದರು. ಜೀವ ಹಾನಿಯಿಂದಾಗಿ ನನಗೆ ತೀವ್ರ ನೋವಾಗಿದೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ,...’ ಎಂದು ಟ್ವೀಟಿಸುವ ಮೂಲಕ ಸಂತಾಪ ಸೂಚಿಸಿದ್ದಾರೆ.

ADVERTISEMENT

'ಈ ಅಪಘಾತದಲ್ಲಿ ನಾನೂ ಸಹ ಗಾಯಗೊಂಡಿದ್ದೇನೆ. ನಾನೇ ‍ಪೊಲೀಸರಿಗೆ ಮಾಹಿತಿ ನೀಡಿದೆ ಹಾಗೂ ಗಾಯಗೊಂಡವರಿಗೆ ವೈದ್ಯಕೀಯ ನೆರವು ದೊರೆಯಲು ಸಹಕಾರ ನೀಡಿದೆ.

ಮೃತರ ಕುಟುಂಬದ ಸದಸ್ಯರ ನೋವು ನನಗೆ ಅರ್ಥವಾಗುತ್ತದೆ. ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಲಿದ್ದೇನೆ' ಎಂದಿದ್ದಾರೆ.

ವಿಡಿಯೊ ಸಹ ಪ್ರಕಟಿಸಿಕೊಂಡಿರು ಶಾಸಕ ಸಿ.ಟಿ.ರವಿ, ಘಟನೆಯನ್ನು ವಿವರಿಸಿದ್ದಾರೆ–

‘ಚೆನ್ನೈಗೆ ತೆರಳುವ ಸಲುವಾಗಿ ನಿನ್ನೆ ರಾತ್ರಿ ಚಿಕ್ಕಮಗಳೂರಿನಿಂದ 11:30ಕ್ಕೆ ಹೊರಟೆ. ನಾನು ಕಾರಿನಲ್ಲಿ ನಿದ್ರೆ ಮಾಡುತ್ತಿದ್ದೆ. ಆಕಾಶ್‌ ಎಂಬುವವರು ಕಾರು ಚಾಲನೆ ಮಾಡುತಿದ್ದ, ಗನ್‌ಮ್ಯಾನ್‌ ರಾಜಾನಾಯಕ್‌ ಸೇರಿ ಮೂವರು ಪ್ರಯಾಣ ಮಾಡುತ್ತಿದ್ದೆವು.

ಏರ್‌ಬ್ಯಾಗ್‌ ಓಪನ್‌ ಆಗಿ ಗಾಡಿ ನಿಂತಾಗಲೇ ನನಗೆ ಏನೂ ಆಗಿದೆ ಅನ್ನೋದು ಗೊತ್ತಾಗಿದ್ದು. ನನಗೆ ಎದೆ ನೋವು ಹಾಗೂ ಮೈಕೈ ತರಚಿದ ಗಾಯಗಳಾಗಿದ್ದವು. ನಾನು ಎದ್ದು ನೋಡಿದರೆ, ಇಬ್ಬರು ನಿಧನರಾಗಿದ್ದರು. ನಾನೇ ಸ್ವತಃ ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಮೂರ್ನಾಲ್ಕು ರೀತಿ ಬೇರೆ ಬೇರೆ ಅವರಿಗೆ ಕರೆ ಮಾಡಿ, ಪೊಲೀಸರನ್ನು ಸಂಪರ್ಕಿಸಿದೆ. ಆಂಬ್ಯುಲೆನ್ಸ್‌ ಹಾಗೂ ಪೊಲೀಸ್‌ ಸಬ್‌ಇನ್‌ಸ್ಪೆಪ್ಟರ್‌ ಬಂದು, ಗಾಯಾಳುಗಳು ಮತ್ತು ಮೃತರನ್ನು ಸ್ಥಳಾಂತರಿಸಿದ ನಂತರವೇ ನಾನು ಹೊರಟು ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರೆಸ್ಟ್‌ನಲ್ಲಿದ್ದೇನೆ. ಚೆನ್ನೈಗೆ ಹೋಗುವ ಕಾರ್ಯಕ್ರಮ ಕ್ಯಾನ್ಸಲ್‌ ಮಾಡಿ ಇಲ್ಲಿಯೇ ಉಳಿದಿದ್ದೇನೆ. ಮೃತರ ಕುಟುಂಬದವರನ್ನು ಭೇಟಿ ಮಾಡುತ್ತೇನೆ. ಅಪಘಾತ ದುರದೃಷ್ಟಕರ.....ಇದು ಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲ... ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.