ADVERTISEMENT

ಇನ್ನೂ ಮೂರು ಡಿಸಿಎಂ ಅಗತ್ಯವಿಲ್ಲ: ಶಾಸಕ ರಂಗನಾಥ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 15:49 IST
Last Updated 17 ಸೆಪ್ಟೆಂಬರ್ 2023, 15:49 IST
ಡಾ.ಎಚ್‌.ಡಿ. ರಂಗನಾಥ್
ಡಾ.ಎಚ್‌.ಡಿ. ರಂಗನಾಥ್   

ಬೆಂಗಳೂರು: ‘ರಾಜ್ಯಕ್ಕೆ ಇನ್ನೂ ಮೂವರು ಉಪ ಮುಖ್ಯಮಂತ್ರಿಗಳ (ಡಿಸಿಎಂ) ಅವಶ್ಯಕತೆ ಇಲ್ಲ. ಪಕ್ಷದ ನಾಯಕರು, ಕಾರ್ಯಕರ್ತರು, ಜನರು ಯಾರೂ ಇದನ್ನು ಅಪೇಕ್ಷೆಪಡುವುದಿಲ್ಲ. ಈಗ ಹೇಗಿದೆಯೋ ಹಾಗೆಯೇ ಮುಂದುವರಿಯಲಿ’ ಎಂದು ಕಾಂಗ್ರೆಸ್‌ ಶಾಸಕ ಡಾ.ಎಚ್‌.ಡಿ. ರಂಗನಾಥ್‌ ಹೇಳಿದರು.

ರಂಗನಾಥ್‌ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಷಡ್ಡಕ (ಪತ್ನಿಯ ತಂಗಿಯ ಗಂಡ). ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಇನ್ನೂ ಮೂವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು’ ಎಂಬ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದರು.

‘ರಾಜಣ್ಣ ಅವರ ಹೇಳಿಕೆ ಬೇಸರ ಉಂಟುಮಾಡಿದೆ. ಸಚಿವರಾಗಿ ಅವರು ಯಾವ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಸಚಿವರಾಗಿ ಅವರು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಸಹಕಾರ ಸಚಿವರಾದ ರಾಜಣ್ಣ ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದರು.

ADVERTISEMENT

ಸಚಿವ ಸಂಪುಟದ ಹಿರಿಯರಲ್ಲಿ ಒಬ್ಬರಾದ ರಾಜಣ್ಣ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಅದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಯಾವುದೇ ಅನುಕೂಲ ಆಗುವುದಿಲ್ಲ. ಸಚಿವ ಸ್ಥಾನವನ್ನು ಒಳ್ಳೆಯ ಕೆಲಸ ಮಾಡುವುದಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟದ್ದು:

‘ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ’ ಎಂಬ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ರಂಗನಾಥ್‌, ‘ಅದು ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟ ವಿಷಯ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ನೇತೃತ್ವದ ಸುಭದ್ರ ಸರ್ಕಾರ ತರಲು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಬಯಸುತ್ತೇನೆ. ಈ ರೀತಿಯ ಬಯಸುವ ಸಾಕಷ್ಟು ಮಂದಿ ಇದ್ದಾರೆ. ಮುಂದಿನ ದಿನಗಳಲ್ಲಿ ಶಿವಕುಮಾರ್‌ ಅವರಿಗೂ ಅವಕಾಶ ನೀಡಲು ಪಕ್ಷದ ಹೈಕಮಾಂಡ್‌ ನಿರ್ಧರಿಸಿದರೆ ಒಳ್ಳೆಯದಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.