ADVERTISEMENT

ಐದನೇ ದಿನವೂ ಮಾಡಾಳ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 16:03 IST
Last Updated 15 ಮಾರ್ಚ್ 2023, 16:03 IST
   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದಾಗ ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಬುಧವಾರವೂ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದರು.

ಕಳೆದ ಗುರುವಾರದಿಂದ ಶಾಸಕರ ವಿಚಾರಣೆ ಆರಂಭವಾಗಿತ್ತು. ಸೋಮವಾರದಿಂದ ಸತತವಾಗಿ ಮೂರು ದಿನ ವಿಚಾರಣೆ ನಡೆದಿದೆ. ಒಟ್ಟು ಐದು ದಿನಗಳ ಕಾಲ ವಿರೂಪಾಕ್ಷಪ್ಪ ವಿಚಾರಣೆ ನಡೆಸಿರುವ ಲೋಕಾಯುಕ್ತದ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್‌ ಮತ್ತು ಡಿವೈಎಸ್‌ಪಿ ಆ್ಯಂಟನಿ ಜಾನ್‌ ಜೆ.ಕೆ. ನೇತೃತ್ವದ ತಂಡ, ತನಿಖಾ ಅವಧಿಯಲ್ಲಿ ವಶಕ್ಕೆ ಪಡೆದಿರುವ ದಾಖಲೆಗಳನ್ನು ಆಧರಿಸಿ ಆರೋಪಿಗಳಿಂದ ಉತ್ತರ ಪಡೆಯುತ್ತಿದೆ.

ಬುಧವಾರ ಮಧ್ಯಾಹ್ನ ಲೋಕಾಯುಕ್ತ ಕಚೇರಿಗೆ ಹಾಜರಾದ ಶಾಸಕರನ್ನು ತನಿಖಾ ತಂಡ, ರಾತ್ರಿಯವರೆಗೂ ವಿಚಾರಣೆ ನಡೆಸಿತು. ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆಯುವುದಕ್ಕಾಗಿ ಪುನಃ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಸಾಧ್ಯತೆ ಇದೆ. ತನಿಖೆಯಲ್ಲಿ ಈವರೆಗಿನ ಪ್ರಗತಿಯನ್ನು ಪರಾಮರ್ಶಿಸಿದ ಬಳಿಕ ನಿರ್ಧಾರಕ್ಕೆ ಬರಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT

ಅಧಿಕಾರಿಗಳೂ ವಿಚಾರಣೆಗೆ ಹಾಜರು: ಕೆಎಸ್‌ಡಿಎಲ್‌ನ ಕೆಲವು ಅಧಿಕಾರಿಗಳನ್ನು ಬುಧವಾರವೂ ವಿಚಾರಣೆ ನಡೆಸಲಾಗಿದೆ. ಲೋಕಾಯುಕ್ತ ಪೊಲೀಸರ ವಶದಲ್ಲಿರುವ ಶಾಸಕರ ಮಗ, ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌, ಅವರ ಖಾಸಗಿ ಕಚೇರಿಯ ಅಕೌಂಟೆಂಟ್‌ ಸುರೇಂದ್ರ ವಿಚಾರಣೆಯೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.