ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಚರಿತ್ರೆಯ ತುಂಬಾ ಘಾತುಕ ಅಧ್ಯಾಯಗಳಿವೆ. ನಿಸ್ಸಂಶಯವಾಗಿ ಅವರೊಬ್ಬ ಕುಖ್ಯಾತ. ಅವರ ತಮ್ಮ ಕೊರಂಗು ಅಲಿಯಾಸ್ ಕೃಷ್ಣ ಮತ್ತು ಐವರು ಪೊಲೀಸ್ ಅಧಿಕಾರಿಗಳ ನಡುವಿನ ಮಾರಾಮಾರಿ ಪ್ರಕರಣದಲ್ಲಿ ನಾನು ಪೊಲೀಸರ ಪರ ವಾದ ಮಂಡಿಸಿದವನು. ಮುನಿರತ್ನ ಎಷ್ಟು ಉತ್ತಮರು ಎಂಬುದನ್ನು ಇದೊಂದೇ ಕೇಸಿನಲ್ಲಿ ಎಲ್ಲಾ ಬಿಡಿಸಿ ಹೇಳಲು ಆಗುವುದಿಲ್ಲ...!
ಮಾದಿಗ ಸಮುದಾಯದ 20 ವರ್ಷದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಿಸಲಾದ ಪ್ರಕರಣದಲ್ಲಿ ಮುನಿರತ್ನ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಗುರುವಾರ ವಿಚಾರಣೆ ನಡೆಸಿದರು.
ಸಂತ್ರಸ್ತೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ‘ಮುನಿರತ್ನ ಅವರ ಕರಾಳ ಇತಿಹಾಸವನ್ನು ತೆರೆದಿಡಬಲ್ಲೆ. ಅದರಲ್ಲಿ ಇದೊಂದು ಝಲಕ್’ ಎಂದು ಮೇಲಿನಂತೆ ವಿವರಿಸಿದರು.
‘ಪೀಣ್ಯದ ಅಕ್ಕಮಹಾದೇವಿ ಕೊಳೆಗೇರಿ ಪ್ರದೇಶವನ್ನು ಮುನಿರತ್ನ ಮತ್ತು ಅವರ ಬೆಂಬಲಿಗರು ಬಲವಂತದಿಂದ ತೆರವುಗೊಳಿಸಿ ಪುನರ್ವಸತಿ ಕೇಳಿದವರ ವಿರುದ್ಧ ಅಮಾನವೀಯವಾಗಿ ವರ್ತಿಸಿದ್ದಾರೆ. ಬಡವರನ್ನು, ಹೆಣ್ಣು ಮಕ್ಕಳನ್ನು ಗುಡಿಸಲುಗಳಿಂದ ರಾತ್ರೋರಾತ್ರಿ ಹೊರ ಹಾಕಿದ್ದಾರೆ. ಇಂತಹ ಕುಕೃತ್ಯಗಳನ್ನು ಮುನಿರತ್ನ ಅನೂಚಾನಾವಾಗಿ ಮಾಡಿಕೊಂಡೇ ಬಂದವರು. ತಮ್ಮ ಮೇಲೆ ಆಪಾದನೆಗಳು ಬಂದಾಗಲೆಲ್ಲಾ ಅವುಗಳಿಂದ ಹೊರ ಬರುವುದು ಹೇಗೆಂಬುದು ಅವರಿಗೆ ಚೆನ್ನಾಗಿ ಕರಗತವಾಗಿದೆ. ಪ್ರತಿ ಘಟನೆಯಲ್ಲೂ ಹಿಂದಿನ ಅನುಭವಗಳ ಆಧಾರದಲ್ಲಿ ತುಂಬಾ ಹುಷಾರಾಗಿ ವರ್ತಿಸುತ್ತಾರೆ’ ಎಂದು ದೂರಿದರು.
ಮುನಿರತ್ನ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ’ಇದರಲ್ಲಿ ಮುನಿರತ್ನ ಪಾತ್ರವೇ ಇಲ್ಲ. ಇದೆಲ್ಲಾ ಬಿಬಿಎಂಪಿ ಕಾನೂನುಬದ್ಧವಾಗಿ ನಡೆಸಿರುವ ಕಾರ್ಯಾಚರಣೆ. ಇದಕ್ಕೆ ಪತ್ರಿಕಾ ವರದಿಗಳೇ ಸಾಕ್ಷಿ. ಸದ್ಯ ಪಾಲಿಕೆಯಲ್ಲಿ ಕಾರ್ಪೋರೇಟರ್‌ಗಳು ಇಲ್ಲ. ಅಧಿಕಾರಿಗಳೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮುನಿರತ್ನ ವಿರುದ್ಧ ರೂಪಿಸಿರುವ ರಾಜಕೀಯ ಪ್ರೇರಿತ ದೂರಿದು. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು’ ಎಂದು ಕೋರಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದರು. ‘ಮುನಿರತ್ನ ವಿರುದ್ಧ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂಬ ಆದೇಶವನ್ನು ವಿಸ್ತರಿಸಿದರು. ಸಿಐಡಿ ಪರ ಪ್ರಾಸಿಕ್ಯೂಟರ್ ಝೈದಾ ಬಾನು ಖಾಜಿ ಹಾಜರಿದ್ದು ತಮ್ಮ ಆಕ್ಷೇಪಣೆ ಸಲ್ಲಿಸಿದರು.
‘ಪೀಣ್ಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್ ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದ 60ರಿಂದ 70ರಷ್ಟು ಉತ್ತರ ಕರ್ನಾಟಕದ ದಲಿತ ಕುಟುಂಬಗಳನ್ನು ಇದೇ 20ರಂದು ಮುನಿರತ್ನ ಮತ್ತು ಬೆಂಬಲಿಗರಾದ ವಸಂತಕುಮಾರ್, ಚನ್ನಕೇಶವ, ಗೊರಗುಂಟೆಪಾಳ್ಯದ ನವೀನ, ಶ್ರೀರಾಮ, ಪೀಣ್ಯದ ಕಿಟ್ಟಿ, ಗಂಗಾ ಮತ್ತು ಇತರರು ಕಾನೂನು ಬಾಹಿರವಾಗಿ ಜೆಸಿಬಿ ತಂದು ತೆರವುಗೊಳಿಸಿದ್ದಾರೆ. ಅಂತೆಯೇ, ನನಗೆ ಜಾತಿನಿಂದನೆ ಮಾಡಿ ಅಲ್ಲಿದ್ದ ಕೆಲ ಹೆಣ್ಣು ಮಕ್ಕಳ ಮೈ–ಕೈ ಮುಟ್ಟಿ ಎಳೆದಾಡಿ ಅವರ ಎದೆಗೆ ಮುನಿರತ್ನ ಒದ್ದಿದ್ದಾರೆ.’ ಎಂದು ಗೀತಾ (20) ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಇದೇ 20ರಂದು ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.