ADVERTISEMENT

ನಾಗೇಂದ್ರ ಸೋದರ ವೆಂಕಟೇಶ ಪ್ರಸಾದ್ ಬಿಜೆಪಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 7:18 IST
Last Updated 19 ಮಾರ್ಚ್ 2019, 7:18 IST
   

ಬಳ್ಳಾರಿ:ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸೋದರ ಬಿ.ವೆಂಕಟೇಶ ಪ್ರಸಾದ್ ನಗರದಲ್ಲಿರುವ ಬಿಜೆಪಿ‌ ಕಚೇರಿಯಲ್ಲಿ ಮಂಗಳವಾರ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು, ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರ ಗೈರು ಹಾಜರಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ಪ್ರಸಾದ್ ಸೇರ್ಪಡೆ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ ಎಂದು ಹೇಳಿದರು.

ನಂತರ ಮಾತನಾಡಿದ ಪ್ರಸಾದ್, ಮೋದಿಯವರ ಆಡಳಿತ ಮೆಚ್ಚಿ‌ ಬಿಜೆಪಿ ಸೇರಿರುವೆ ಎಂದರು.

ADVERTISEMENT

‘ಪಕ್ಷದ ಹೈಕಮಾಂಡ್ ಅವಕಾಶ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ‌ ಬಳ್ಳಾರಿ ಯಿಂದ ಸ್ಪರ್ಧಿಸುವೆ’ ಎಂದರು.

‘ಸೋದರ‌ ನಾಗೇಂದ್ರ ಕಾಂಗ್ರೆಸ್ ನಲ್ಲಿ ಇರುತ್ತಾರೆ. ನಾನು ಬಿಜೆಪಿ ಸೇರುವುದಕ್ಕೂ ಸೋದರ ಅಲ್ಲಿರುವುದಕ್ಕೂ ಸಂಬಂಧವಿಲ್ಲ’ ಎಂದು ಪ್ರತಿಪಾದಿಸಿದರು.

‘ಸೋದರರು ಒಟ್ಟಿಗೇ ಇರಬಹುದು. ಕೆಲವು ಕಾರಣಕ್ಕೆ ಬೇರೆಯಾಗಬಹುದು. ಈಗ ನಾನು ಬಿಜೆಪಿ ಮೆಚ್ಚಿ ಬೇಷರತ್ತಾಗಿ ಇಲ್ಲಿಗೆ ಬಂದಿರುವೆ’ ಎಂದರು.

ಲೋಕಸಭೆ ಉಪಚುನಾವಣೆಯಲ್ಲಿ ಪ್ರಸಾದ್ ಅವರು ಕಾಂಗ್ರೆಸ್ ಟಿಕೆಟ್ ಬಯಸಿದ್ದರೂ ದೊರಕಿರಲಿಲ್ಲ. ಈಗ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಬಿಜೆಪಿ‌ ಸೇರಿರುವುದು ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಂಜಯ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ದೀನಾ ಮೃತ್ಯುಂಜಯ ಜಿನಗ, ಮುರಾರಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.