ADVERTISEMENT

ಶಾಸಕರ ಆಸ್ತಿ ಇ.ಡಿ, ಐ.ಟಿ ತನಿಖೆ: ಶಾಸಕ ರಮೇಶ್‌ ಕುಮಾರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 22:01 IST
Last Updated 14 ಮಾರ್ಚ್ 2022, 22:01 IST
ಕೆ.ಆರ್‌.ರಮೇಶ್‌ ಕುಮಾರ್‌
ಕೆ.ಆರ್‌.ರಮೇಶ್‌ ಕುಮಾರ್‌   

ಬೆಂಗಳೂರು: ಶಾಸಕರು ತಮ್ಮ ಆಸ್ತಿ– ಪಾಸ್ತಿಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ಸಂಪತ್ತಿನ ಪ್ರಮಾಣದಲ್ಲಿ ಅಸಹಜವಾಗಿ ಏರಿಕೆ ಆಗಿರುವುದು ಕಂಡುಬಂದರೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಕೆ.ಆರ್‌.ರಮೇಶ್‌ ಕುಮಾರ್‌ ಒತ್ತಾಯಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯಿಂದ ಚುನಾವಣೆಗೆ ಹಲವು ಶಾಸಕರ ಸಂಪತ್ತು ಹಲವು ಪಟ್ಟು ಹೆಚ್ಚಾಗುತ್ತಿದ್ದರೂ ಚುನಾವಣಾ ಅಯೋಗ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಾಗಿದ್ದ ಮೇಲೆ ಪ್ರಮಾಣಪತ್ರ ಪಡೆದು ಸುಮ್ಮನೆ ಕೂರುವುದಾದರು ಏತಕ್ಕೆ? ತನಿಖೆ ನಡೆಸಿದಾಗ ಮಾತ್ರ ಆಯೋಗಕ್ಕೂ ಗೌರವ ಬರುತ್ತದೆ ಎಂದರು.

‘ನಮ್ಮ ಶಾಸಕರು ಜನರ ಸೇವೆಯನ್ನು ಅಹೋರಾತ್ರಿ ಮಾಡುತ್ತಾರೆ. ಅವರಿಗೆ ಪುರುಸೊತ್ತೇ ಇರುವುದಿಲ್ಲ. ಅದರ ನಡುವೆಯೂ ಅವರ ಆಸ್ತಿ ₹3 ಕೋಟಿ ಇದ್ದಿದ್ದು ಐದು ವರ್ಷಗಳಲ್ಲೇ ₹30 ಕೋಟಿಗೆ ಏರುತ್ತದೆ. ಇದು ಹೇಗೆ ಸಾಧ್ಯ’ ಎಂದು ಅವರು ಕುಟುಕಿದರು.

ADVERTISEMENT

ಈ ವೇಳೆ ಅವರು ಕಾಮರಾಜ್‌ ಅವರ ಉದಾಹರಣೆಯನ್ನು ಹೇಳಿದರು. ‘ಕಾಮರಾಜ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಬಳಿಕ ಅವರು ಮನೆಗೆ ಬರುತ್ತಾರೆ. ಅವರ ತಾಯಿ ಮಗನನ್ನು ಖುಷಿಯಿಂದ ಅಪ್ಪಿಕೊಳ್ಳುತ್ತಾರೆ. ಮುಖ್ಯಮಂತ್ರಿಯಾಗಿದ್ದು ಅಮ್ಮನಿಗೆ ಖುಷಿಯಾಗಿದೆ ಎಂದು ಕಾಮರಾಜ್‌ ಅಂದುಕೊಳ್ಳುತ್ತಾರೆ. ಆಗ ತಾಯಿ, ‘ಮಗ ನೀನು ಯಾವುದೋ ದೊಡ್ಡ ಹುದ್ದೆಗೆ ಏರಿದೆಯಂತಲ್ಲ. ಹೀಗಾಗಿ, ಅಧಿಕಾರಿಗಳು ಮನೆಗೆ ನಲ್ಲಿ ನೀರಿನ ಸಂಪರ್ಕ ಹಾಕಿಸಿದರು’ ಎಂದು ಹೇಳಿದರು. ‘ಅಮ್ಮಾ, ನಿನ್ನ ಖುಷಿ ಹೆಚ್ಚು ಹೊತ್ತು ಇರುವುದಿಲ್ಲ. ಆ ಸಂಪರ್ಕವನ್ನು ನಾನು ಈಗಲೇ ತೆಗೆಸಿ ಹಾಕುವೆ’ ಎಂದು ಕಾಮರಾಜ್‌ ಪ್ರತಿಕ್ರಿಯಿಸಿದರು. ಹೀಗಿದ್ದರು ನಮ್ಮ ರಾಜಕಾರಣಿಗಳು’ ಎಂದು ನೆನಪಿಸಿಕೊಂಡರು.

ಬಿಜೆಪಿಯ ‍ಪಿ.ರಾಜೀವ್‌, ‘ಮುಖ್ಯಮಂತ್ರಿಯಾಗಿದ್ದ ಕಾಮರಾಜ್ ಅವರು ಆಪ್ತ ಸಹಾಯಕನ ಜತೆಗೆ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಕೆಲವು ಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿದ್ದರು. ಈ ಮಕ್ಕಳು ಶಾಲೆಗೆ ಹೋಗಲಿಲ್ಲವೇಕೆ ಎಂದು ಕಾಮರಾಜ್‌ ಪ್ರಶ್ನಿಸಿದರು. ಬಡತನದ ಕಾರಣದಿಂದ ಅವರು ಶಾಲೆಗೆ ಹೋಗುತ್ತಿಲ್ಲ ಎಂದು ಆಪ್ತ ಸಹಾಯಕ ಹೇಳಿದರು. ಕಾಮರಾಜ್ ಕೆಲವೇ ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದರು’ ಎಂದರು.

‘ರಾಬರ್ಟ್ ವಾದ್ರಾ ತಪ್ಪುಮಾಡಿದ್ರೂ ಮಣ್ಣು ತಿನ್ತಾರೆ’
‘ಅಂಬಾನಿ ಆಸ್ತಿ ₹1.13 ಲಕ್ಷ ಕೋಟಿ ಇದ್ದದ್ದು ₹5.74 ಲಕ್ಷ ಕೋಟಿಗೇರಿದೆ. ಅದಾನಿ ಆಸ್ತಿಯೂ ಅದೇ ರೀತಿ ಏರಿಕೆ ಆಗಿದೆ ಇದು ಹೇಗೆ ಸಾಧ್ಯವಾಯಿತು’ ಎಂದು ರಮೇಶ್‌ ಕುಮಾರ್‌ ಪ್ರಶ್ನಿಸಿದರು.

ಇದಕ್ಕೆ ತಿರುಗೇಟು ನೀಡಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ಇವರು ನಮ್ಮ ಕಾಲದಲ್ಲಿ ಹುಟ್ಟಿಕೊಂಡವರಲ್ಲ. ಕಾಂಗ್ರೆಸ್‌ ಕಾಲದಲ್ಲೇ ಹಣ ಮಾಡಿದವರು. ಅಲ್ಪ ಕಾಲದಲ್ಲಿ ಎಂಟು ಹತ್ತು ಪಟ್ಟು ಹಣ ಹೇಗೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟ ರಾಬರ್ಟ್ ವಾದ್ರಾ ಬಗ್ಗೆ ಮಾತನಾಡಿ’ ಎಂದು ಕಾಲೆಳೆದರು. ‘ನನ್ನ ಸೊಂಟಕ್ಕೆ ಪಕ್ಷದ ಹಗ್ಗ ಕಟ್ಟಿಲ್ಲ. ಯಾವುದೇ ಮುಲಾಜಿಲ್ಲ ರಾಬರ್ಟ್‌ ವಾದ್ರಾ ಅಕ್ರಮ ಮಾಡಿದ್ದರೆ ಮಣ್ಣು ತಿನ್ತಾರೆ’ ಎಂದು ರಮೇಶ್‌ಕುಮಾರ್‌ ಪ್ರತಿಕ್ರಿಯಿಸಿದರು.

*

ಕೆಲವು ರಾಜಕಾರಣಿಗಳ ಕುಟುಂಬ ಸದಸ್ಯರೆಲ್ಲರ ಆಸ್ತಿ ಲೆಕ್ಕ ಹಾಕಿದರೆ ₹25 ಸಾವಿರ ಕೋಟಿ ದಾಟುತ್ತದೆ. ಶಾಸಕರ ಆಸ್ತಿ ತನಿಖೆಗೆ ನಾವು ನಿರ್ಣಯ ತೆಗೆದುಕೊಳ್ಳಬೇಕು.
-ಕೆ.ಆರ್‌.ರಮೇಶ್‌ ಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.