ADVERTISEMENT

ಪಿಎಸ್‌ಐ ಅಕ್ರಮ: ಶಾಸಕರ ಪುತ್ರ, ಸಹೋದರ ಶಾಮೀಲು - ಚಾರ್ಜ್‌ಶೀಟ್‌

ಸಿಐಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 19:30 IST
Last Updated 12 ಜುಲೈ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ‘ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಅಫಜಲಪುರದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ ಅವರ ಪುತ್ರ ಅರುಣಕುಮಾರ್ ಪಾಟೀಲ ಹಾಗೂ ಶಾಸಕರ ಸಹೋದರ ಎಸ್‌.ವೈ. ಪಾಟೀಲ ಶಾಮೀಲಾಗಿದ್ದರು. ಈ ಸಂಬಂಧ ನನ್ನೊಂದಿಗೆ ಮತ್ತು ಮಂಜುನಾಥ ಮೇಳಕುಂದಿಯೊಂದಿಗೆ ಮಾತನಾಡಿದ್ದರು’ ಎಂದು ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಸಿಐಡಿ ಅಧಿಕಾರಿಗಳ ಎದುರು ಒಪ್ಪಿದ್ದಾರೆ.

ಈ ವಿಚಾರವನ್ನು ಏಪ್ರಿಲ್ 24ರಂದು ತಮ್ಮ ಎದುರು ವಿಚಾರಣೆ ವೇಳೆ ತಿಳಿಸಿದ್ದಾಗಿ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ.

‘ಪರೀಕ್ಷೆಗೂ ಮೊದಲು ನನಗೆ ಕರೆ ಮಾಡಿದ್ದ ಶಾಸಕರ ಪುತ್ರ ಅರುಣಕುಮಾರ್ ತಂದೆಯವರ ಗನ್‌ಮ್ಯಾನ್ ಹಯ್ಯಾಳಿ ದೇಸಾಯಿ ಪಿಎಸ್‌ಐ ಪರೀಕ್ಷೆ ಬರೆದಿದ್ದು, ಆತನನ್ನು ಪಾಸ್ ಮಾಡಿಸಬೇಕು ಎಂದು ಹೇಳಿದರು. ಅದಕ್ಕೆ ನಾನು ಮಂಜುನಾಥ ಮೇಳಕುಂದಿ ಮೊಬೈಲ್ ನಂಬರ್ ಕೊಟ್ಟಿದ್ದೆ. ನಂತರ ನನಗೆ ಕರೆ ಮಾಡಿದ ಮೇಳಕುಂದಿ, ಹಯ್ಯಾಳಿ ಪಾಸ್ ಮಾಡಿಸಲು ಹಣ ಯಾರು ಕೊಡುತ್ತಾರೆ ಎಂದು ಅರುಣಕುಮಾರಗೆ ಕೇಳಿದೆ. ಹಣವನ್ನು ನನ್ನ ಚಿಕ್ಕಪ್ಪ ಎಸ್‌.ವೈ. ಪಾಟೀಲ ಕೊಡುತ್ತಾರೆ ಎಂದು ಹೇಳಿದ್ದಾಗಿ ತಿಳಿಸಿದರು. ನಂತರ ₹40 ಲಕ್ಷ ಕೊಡುವಂತೆ ಹೇಳು ಎಂದು ಮಂಜುನಾಥ ಹೇಳಿದ್ದ. ಅಂತಿಮವಾಗಿ ₹ 30 ಲಕ್ಷಕ್ಕೆ ಡೀಲ್ ಮುಗಿಯಿತು. ಮುಂಗಡ ಹಣವಾಗಿ ₹10 ಲಕ್ಷವನ್ನು ಕೊಡಲು ಒಪ್ಪಿದರು. ಒಂದು ಬಾರಿ ನಾನು ಹೋಗಿ ₹5 ಲಕ್ಷ, ಮತ್ತೊಂದು ಬಾರಿ ₹5 ಲಕ್ಷವನ್ನುನನ್ನ ಅಣ್ಣ ಮಹಾಂತೇಶ ಪಾಟೀಲ ಪಡೆದಿದ್ದೇವೆ’ ಎಂದು ತಿಳಿಸಿದ್ದಾಗಿ ದೋಷಾರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.