ADVERTISEMENT

ಸರ್ಕಾರದ ಕಾರ್ಯವೈಖರಿಗೆ ಶಾಸಕ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಮೇ 2020, 12:26 IST
Last Updated 29 ಮೇ 2020, 12:26 IST
ಜಿ.ಎಚ್. ತಿಪ್ಪಾರೆಡ್ಡಿ
ಜಿ.ಎಚ್. ತಿಪ್ಪಾರೆಡ್ಡಿ   

ಚಿತ್ರದುರ್ಗ: ರಾಜ್ಯ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ‘ಸರ್ಕಾರ ಇನ್ನಷ್ಟು ಉತ್ತಮ ಆಡಳಿತ ನಡೆಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಯಸ್ಸಿಗೆ ಮೀರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲ ಸಚಿವರು ಅಭಿವೃದ್ಧಿ ಬಗ್ಗೆ ಗಮನಹರಿಸುತ್ತಿಲ್ಲ. ಇದು ಬಿಜೆಪಿ ಸರ್ಕಾರದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವರು ಮೂರು ತಿಂಗಳಿಗೊಮ್ಮೆ ಚಿತ್ರದುರ್ಗಕ್ಕೆ ಭೇಟಿ ನೀಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಸೀಮಿತರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಶಾಸಕರೊಂದಿಗೆ ಚರ್ಚೆ ಮಾಡುತ್ತಿಲ್ಲ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು.

ADVERTISEMENT

‘ಸರ್ಕಾರದಲ್ಲಿ ಹಿರಿಯ ಶಾಸಕರಿದ್ದೇವೆ. ಸಚಿವ ಸಂಪುಟ ವಿಸ್ತರಣೆಯ ವೇಳೆ ಹಿರಿತನ, ಅನುಭವ ಪರಿಗಣಿಸಬೇಕು. ಪಕ್ಷದ ಚೌಕಟ್ಟಿನಲ್ಲೇ ಹಕ್ಕು ಮಂಡನೆ ಮಾಡುತ್ತಿದ್ದೇವೆ. ಪಕ್ಷದ ವರಿಷ್ಠರ ಗಮನ ಸೆಳೆಯುತ್ತಿದ್ದೇವೆ. ಇದು ಖಂಡಿತ ಭಿನ್ನಮತವಲ್ಲ, ಅಭಿಪ್ರಾಯ’ ಎಂದರು.

‘ಮಧ್ಯ ಕರ್ನಾಟಕ ವ್ಯಾಪ್ತಿಯಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆದಿದೆ. ಪಕ್ಷಕ್ಕೆ ದುಡಿದವರ ಶ್ರಮಕ್ಕೆ ಬೆಲೆ ಸಿಗಬೇಕಿದೆ. ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಹೊರಜಿಲ್ಲೆಯವರಿಗೇ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಜಿಲ್ಲೆಗೆ ಅನ್ಯಾಯವಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.