ADVERTISEMENT

ಕ್ರಿಮಿನಲ್‌ ಪ್ರಕರಣಗಳ ಮಾಹಿತಿ ಮರೆಮಾಚಿದ ಆರೋಪ: ಶಾಸಕ ಉದಯ ಗರುಡಾಚಾರ್ ದೋಷಮುಕ್ತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:33 IST
Last Updated 25 ಏಪ್ರಿಲ್ 2024, 15:33 IST
ಉದಯ ಗರುಡಾಚಾರ್
ಉದಯ ಗರುಡಾಚಾರ್   

ಬೆಂಗಳೂರು: ‘ಚುನಾವಣೆ ವೇಳೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಮೇಲಿರುವ ಕ್ರಿಮಿನಲ್‌ ಪ್ರಕರಣಗಳ ಮಾಹಿತಿ ಮರೆಮಾಚಿದ್ದಾರೆ’ ಎಂಬ ಆರೋಪದಡಿ ಶಾಸಕ ಉದಯ ಗರುಡಾಚಾರ್‌ ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಎರಡು ತಿಂಗಳು ಜೈಲು ಶಿಕ್ಷೆ ಮತ್ತು ದಂಡವನ್ನು ರದ್ದುಪಡಿಸಿರುವ ಹೈಕೋರ್ಟ್‌ ಅವರನ್ನು ಈ ಕುರಿತ ಆರೋಪಗಳಿಂದ ದೋಷಮುಕ್ತಗೊಳಿಸಿದೆ.

ಈ ಸಂಬಂಧ ಉದಯ ಗರುಡಾಚಾರ್‌ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ಈ ಸಂಬಂಧ ವಿಚಾರಣಾ ನ್ಯಾಯಾಲಯದ ನೀಡಿದ್ದ ಆದೇಶವನ್ನು ತಳ್ಳಿ ಹಾಕಿದೆ. ಶಾಸಕರು ಪಾವತಿಸಿರುವ ದಂಡದ ಮೊತ್ತವನ್ನು ವಾಪಸು ನೀಡುವಂತೆಯೂ ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣವೇನು?: ‘ಶಾಸಕ ಉದಯ್ ಗರುಡಾಚಾರ್ 2018ರಲ್ಲಿ ಚಿಕ್ಕಪೇಟೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣ ಹಾಗೂ ಪತ್ನಿಯ ಬ್ಯಾಂಕ್‌ ವಿವರಗಳನ್ನು ಬಹಿರಂಗಪಡಿಸಿಲ್ಲ’ ಎಂದು ಆರೋಪಿಸಿ ಎಚ್‌.ಜಿ.ಪ್ರಶಾಂತ್‌ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.

ADVERTISEMENT

ದೂರಿನ ವಿಚಾರಣೆ ನಡೆಸಿದ್ದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ (42ನೇ ಎಸಿಎಂಎಂ) ಎರಡು ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಿ 2022ರ ಅಕ್ಟೋಬರ್ 13ರಂದು ಆದೇಶಿಸಿತ್ತು. ಆ ಆದೇಶವನ್ನು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ 2023ರ ಸೆಪ್ಟೆಂಬರ್ 11ರಂದು ಪುರಸ್ಕರಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.