ADVERTISEMENT

‘ಕೈ’ ಕೊಟ್ಟ ಜಾಧವ ‘ಕಮಲ’ ತೆಕ್ಕೆಗೆ

ಅನರ್ಹತೆಗೆ ಮೊದಲೇ ರಾಜೀನಾಮೆ; ಸಭಾಧ್ಯಕ್ಷ ರಮೇಶ್‌ ಕುಮಾರ್‌ ನಡೆಯತ್ತ ಕಾಂಗ್ರೆಸ್‌ ಚಿತ್ತ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 18:27 IST
Last Updated 4 ಮಾರ್ಚ್ 2019, 18:27 IST
ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‌ ಗ್ರಾಮದ ನಿವಾಸದಲ್ಲಿ ಸೋಮವಾರ ಚಿಂಚೋಳಿ ಕಾಂಗ್ರೆಸ್‌ ಶಾಸಕ ಡಾ. ಉಮೇಶ ಜಾಧವ ರಾಜೀನಾಮೆ ಸಲ್ಲಿಸಿದರು
ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‌ ಗ್ರಾಮದ ನಿವಾಸದಲ್ಲಿ ಸೋಮವಾರ ಚಿಂಚೋಳಿ ಕಾಂಗ್ರೆಸ್‌ ಶಾಸಕ ಡಾ. ಉಮೇಶ ಜಾಧವ ರಾಜೀನಾಮೆ ಸಲ್ಲಿಸಿದರು   

ಕಲಬುರ್ಗಿ/ ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಂಚೋಳಿ ಶಾಸಕ ಉಮೇಶ ಜಾಧವ, ಬಿಜೆಪಿ ತೆಕ್ಕೆ ಸೇರುವುದು ಖಚಿತವಾಗಿದೆ.

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿಯ ‘ಆಪರೇಷನ್‌ ಕಮಲ’ದ ಜೊತೆ ಜಾಧವ ಕೂಡಾ ಕೈ ಜೋಡಿಸಿದ್ದರು. ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರ ಜೊತೆ ಗುರುತಿಸಿಕೊಂಡಿದ್ದ ಅವರು ಮುಂಬೈ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಗೈರಾದ ಕಾರಣಕ್ಕೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ಜಾಧವ, ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ ಮತ್ತು ಬಿ. ನಾಗೇಂದ್ರ ಅವರಿಗೆ ನೋಟಿಸ್‌ ನೀಡಿದ್ದರು. ಮೊದಲ ನೋಟಿಸ್‌ಗೆ ಉತ್ತರಿಸಿದ್ದ ಈ ನಾಲ್ವರೂ, ‘ಕಾಂಗ್ರೆಸ್‌ ಜೊತೆ ನಿಷ್ಠೆ ತೋರಿಸಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದರು.

ADVERTISEMENT

ಆದರೆ, ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಕೊಟ್ಟ ನೋಟಿಸ್‌ಗೆ ಸ್ಪಂದಿಸಿರಲಿಲ್ಲ. ಆದರೆ, ಮತ್ತೆ ಕರೆದ ಸಿಎಲ್‌ಪಿ ಸಭೆಗೆ ಹಾಜರಾಗುವಂತೆ ನೀಡಿದ ನೋಟಿಸ್‌ಗೂ ಮನ್ನಣೆ ನೀಡದ ಈ ಶಾಸಕರು, ಕಾರಣ ನೀಡುವ ಜೊತೆಗೆ ಪಕ್ಷದಲ್ಲೇ ಇರುವುದಾಗಿ ತಿಳಿಸಿದ್ದರು. ಆದರೆ, ಖುದ್ದು ಹಾಜರಾಗದ ಕಾರಣಕ್ಕೆ ಎಲ್ಲ ಸಾಕ್ಷ್ಯಗಳ ಸಹಿತ ನಾಲ್ವರನ್ನೂ ‘ಪಕ್ಷಾಂತರ ನಿಷೇಧ’ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸಭಾಧ್ಯಕ್ಷ ಕೆ.ಆರ್‌. ರಮೇಶಕುಮಾರ್‌ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದರು.

ಈ ಮಧ್ಯೆ, ವಿಧಾನಮಂಡಲ ಅಧಿವೇಶನಕ್ಕೆ ಹಾಜರಾಗುವ ಮೂಲಕ ಈ ನಾಲ್ವರೂ ಅಚ್ಚರಿ ಮೂಡಿಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಈ ನಾಲ್ವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿತ್ತು.

ಇದೀಗ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಾಧವ್‌, ಮಾತೃಪಕ್ಷ ತ್ಯಜಿಸಲು ಮುಂದಾಗಿದ್ದಾರೆ. ಆದರೆ, ಇತರ ಮೂವರ ಶಾಸಕರ ನಡೆ ಇನ್ನೂ ನಿಗೂಢವಾಗಿದೆ.

ಪ್ರಿಯಾಂಕ್ ಹಸ್ತಕ್ಷೇಪ ಆರೋಪ: ‘ಚಿಂಚೋಳಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಕೊಡಲಿಲ್ಲ. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಸಹಕರಿಸುತ್ತಿಲ್ಲ’ ಎಂದು ಹಲವು ಬಾರಿ ಜಾಧವ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್, ‘ಎರಡು ಬಾರಿ ಕರೆ ಮಾಡಿದರೂ ಜಾಧವ ಸಂಪರ್ಕ ಸಾಧ್ಯವಾಗಲಿಲ್ಲ. ಅವರು ಪಕ್ಷ ಬಿಡುವುದಾದರೆ ಬಿಡಲಿ, ಆದರೆ ಇನ್ನೊಬ್ಬರ ಮೇಲೆ ಆರೋಪ ಹೊರೆಸಿ ಹೋಗುವುದು ಸರಿಯಲ್ಲ’ ಎಂದು ಹೇಳಿದ್ದರು.

ಉಮೇಶ ಜಾಧವ ಹೇಳಿಕೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಸದ ಮಲ್ಲಿಕಾರ್ಜುನ ಖರ್ಗೆ, ‘ದೊಡ್ಡವರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ’ ಎಂದಷ್ಟೇ ಹೇಳಿದ್ದರು. ಪಕ್ಷದ ಜಿಲ್ಲಾ ಮುಖಂಡರು ಸೇರಿದಂತೆ ಬಹುತೇಕರು ಜಾಧವ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದರು.

‘ಆಪರೇಷನ್ ಕಮಲಕ್ಕೆ ಬಲಿಯಾಗಿರುವುದು ಸ್ಪಷ್ಟ’

‘ಉಮೇಶ ಜಾಧವ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದನ್ನು ಗಮನಿಸಿದರೆ ಅವರು ಆಪರೇಷನ್‌ ಕಮಲಕ್ಕೆ ಬಲಿಯಾಗಿರುವುದು ಸ್ಪಷ್ಟವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.

‘ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರಲ್ಲಿರುವ ಧ್ವನಿ ತಮ್ಮದೇ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದರು. ಜಾಧವ ರಾಜೀನಾಮೆ ಕೊಟ್ಟಿರುವುದರಿಂದ ಎಲ್ಲೋ ಒಂದು ಕಡೆ ಅದು ಸತ್ಯ ಎಂದು ಅನಿಸುತ್ತಿದೆ’ ಎಂದರು. ‘ಲೋಕಸಭೆ ಚುನಾವಣೆಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾಧವ ಸ್ಪರ್ಧೆ’ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸಂವಿಧಾನಾತ್ಮಕವಾಗಿ ಯಾರೇ ಸ್ಪರ್ಧಿಸಿದರೂ ಸ್ವಾಗತಿಸುತ್ತೇನೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಯಾರು, ಹೇಗೆ? ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಹೀಗಾಗಿ ಜನರೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

* ರಾಜೀನಾಮೆ ಕೊಟ್ಟ ಬಳಿಕ ಪಕ್ಷಕ್ಕೂ ಜಾಧವ ಅವರಿಗೂ ಸಂಬಂಧವಿಲ್ಲ. ಅವರು ಯಾರ ವಿರುದ್ಧವಾದರೂ ಸ್ಪರ್ಧಿಸಿಲಿ

- ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ

*ಜಾಧವ ಮೇಲೆ ನಾನು ಈಗಾಗಲೇ ಸಭಾಧ್ಯಕ್ಷರಿಗೆ ದೂರು ಕೊಟ್ಟಿದ್ದೇನೆ. ಪೂರಕ ದಾಖಲೆಗಳನ್ನೆಲ್ಲ ಕೊಟ್ಟಿದ್ದೇನೆ.

- ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

*ನಾನಂತೂ ಜಾಧವ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೆ. ಅವರಿಗೆ ತಪ್ಪಿನ ಅರಿವಾಗಲಿದೆ

- ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

*ಪಕ್ಷದ ಬೆನ್ನಿಗೆ ಚೂರಿ ಹಾಕಿರುವ ಜಾಧವ್ ಎಷ್ಟು ದೊಡ್ಡ ಸ್ವಾರ್ಥಿ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ರಾಜೀನಾಮೆಯಿಂದ ಯಾವುದೇ ಪರಿಣಾಮ ‌ಬೀರುವುದಿಲ್ಲ

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.