ADVERTISEMENT

ಅಂಗವಿಕಲರಿಗೆ ತ್ರಿಚಕ್ರ ವಾಹನ: ಹೆಚ್ಚಿನ ಅನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 16:07 IST
Last Updated 18 ಮಾರ್ಚ್ 2022, 16:07 IST

ಬೆಂಗಳೂರು: ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲು ಹೆಚ್ಚಿನ ಅನುದಾನ ಒದಗಿಸುವಂತೆ ಹಲವು ಶಾಸಕರು ವಿಧಾನಸಭೆಯಲ್ಲಿ ಶುಕ್ರವಾರ ಒತ್ತಾಯಿಸಿದರು.

ರಾಜ್ಯದಲ್ಲಿ 2018–19ರಿಂದ ಈವರೆಗೆ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿರುವ ಕುರಿತು ಕಾಂಗ್ರೆಸ್‌ ಸಹ ಸದಸ್ಯ ಶರತ್‌ ಬಚ್ಚೇಗೌಡ ಪ್ರಶ್ನೆಗೆ ಉತ್ತರ ನೀಡಿದ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವ ಹಾಲಪ್ಪ ಆಚಾರ್‌, ‘2018–19ರಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿಲ್ಲ. 2019–20ರಲ್ಲಿ 1,566 ಮತ್ತು 2020–21ರಲ್ಲಿ 1,467 ಜನರಿಗೆ ತ್ರಿಚಕ್ರ ವಾಹನ ವಿತರಿಸಲಾಗಿದೆ’ ಎಂದರು.

‘ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬೆರಳೆಣಿಕೆಯಷ್ಟು ಮಂದಿಗೂ ತ್ರಿಚಕ್ರ ವಾಹನ ವಿತರಿಸಲು ಆಗುತ್ತಿಲ್ಲ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಸಲು ಅವಕಾಶ ಲಭಿಸುತ್ತಿಲ್ಲ. ಸರ್ಕಾರ ನೀತಿ ಬದಲಿಸಬೇಕು. ಅಂಗವಿಕಲರಿಗೆ ಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನ ನೀಡಬೇಕು’ ಎಂದು ಶರತ್‌ ಆಗ್ರಹಿಸಿದರು.

ADVERTISEMENT

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಅವರು, ‘ನನ್ನ ಕ್ಷೇತ್ರದಲ್ಲಿ 100 ಮಂದಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಅಗತ್ಯವಿದೆ. ಪಟ್ಟಿ ಸಿದ್ಧಪಡಿಸಿ ಇರಿಸಿಕೊಂಡಿದ್ದೇನೆ. ಆದರೆ, ಅನುದಾನವೇ ಇಲ್ಲ. ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಮೂಲಕವಾದರೂ ಹೆಚ್ಚು ನೆರವು ಒದಗಿಸಬೇಕು’ ಎಂದು ಒತ್ತಾಯಿಸಿದರು.

ಈ ಬೇಡಿಕೆಗೆ ದನಿಗೂಡಿಸಿದ ಹಲವು ಶಾಸಕರು, ಅನುದಾನ ಹೆಚ್ಚಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.