ADVERTISEMENT

ಆನಂದ್‌ ಸಿಂಗ್‌–ಭೀಮಾ ನಾಯ್ಕ ಮಧ್ಯೆ ಸಂಧಾನ?

ಸಿಂಗ್‌ ಅಭಿಮಾನಿಗಳ ಸಂಘದ ಕಚೇರಿಗೆ ಬೀಗ, ಫ್ಲೆಕ್ಸ್ ತೆರವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 12:34 IST
Last Updated 31 ಜನವರಿ 2019, 12:34 IST
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಮನೆ ಎದುರು ಶಾಸಕ ಆನಂದ್‌ ಸಿಂಗ್‌ ಬೆಂಬಲಿಗರು ತೆರೆದಿದ್ದ ಅಭಿಮಾನಿಗಳ ಸಂಘದ ಕಚೇರಿಗೆ ಬೀಗ ಹಾಕಿ, ಅದರ ಎದುರಿನ ಸಿಂಗ್‌ ಫ್ಲೆಕ್ಸ್‌ ತೆರವುಗೊಳಿಸಿರುವುದು
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಮನೆ ಎದುರು ಶಾಸಕ ಆನಂದ್‌ ಸಿಂಗ್‌ ಬೆಂಬಲಿಗರು ತೆರೆದಿದ್ದ ಅಭಿಮಾನಿಗಳ ಸಂಘದ ಕಚೇರಿಗೆ ಬೀಗ ಹಾಕಿ, ಅದರ ಎದುರಿನ ಸಿಂಗ್‌ ಫ್ಲೆಕ್ಸ್‌ ತೆರವುಗೊಳಿಸಿರುವುದು   

ಹೊಸಪೇಟೆ: ಶಾಸಕರಾದ ಆನಂದ್‌ ಸಿಂಗ್‌ ಹಾಗೂ ಭೀಮಾ ನಾಯ್ಕ ನಡುವಿನ ಭಿನ್ನಮತ ಶಮನಕ್ಕೆ ಕಾಂಗ್ರೆಸ್‌ ವರಿಷ್ಠರು ಮುಂದಾಗಿದ್ದು,ಮೊದಲ ಹಂತದಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದೆ ಎನ್ನಲಾಗಿದೆ.

ಅದನ್ನು ಪುಷ್ಟೀಕರಿಸುವಂತೆಹಗರಿಬೊಮ್ಮನಹಳ್ಳಿಯಲ್ಲಿ ಭೀಮಾ ನಾಯ್ಕ ಮನೆ ಮುಂದೆ ತೆರೆದಿದ್ದ ಆನಂದ್‌ ಸಿಂಗ್‌ ಅಭಿಮಾನಿಗಳ ಸಂಘದ ಕಚೇರಿಗೆ ಬೀಗ ಹಾಕಿ, ಅಲ್ಲಿದ್ದ ಸಿಂಗ್‌ ಫ್ಲೆಕ್ಸ್‌ ಅನ್ನು ಬುಧವಾರ ತೆರವುಗೊಳಿಸಲಾಗಿದೆ.

ತಾಲ್ಲೂಕಿನ ಮರಿಯಮ್ಮನಹಳ್ಳಿಯ ಬಳಿಯ ಬಿ.ಎಂ.ಎಂ.ಇಸ್ಪಾತ್ ಕಂಪನಿ ವಿಷಯದಲ್ಲಿ ಇಬ್ಬರ ನಡುವೆ ಭಿನ್ನಮತ ಉಂಟಾಗಿತ್ತು. ನಂತರ ಆನಂದ್‌ ಸಿಂಗ್‌ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಆರಂಭಿಸಿದ್ದರು. ನಂತರ ಅವರ ಬೆಂಬಲಿಗರು ‘ಆನಂದ್‌ ಸಿಂಗ್‌ ಅಭಿಮಾನಿಗಳ ಸಂಘ’ದ ಹೆಸರಿನಲ್ಲಿ ಭೀಮಾ ನಾಯ್ಕ ಮನೆ ಮುಂದೆ ಕಚೇರಿ ತೆಗೆದಿದ್ದರು. ಉದ್ಘಾಟನೆಗೆ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಅದರಿಂದ ಕೆರಳಿದ್ದ ಭೀಮಾ ನಾಯ್ಕ ಬೆಂಬಲಿಗರು ಆನಂದ್‌ ಸಿಂಗ್‌ ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಅವಮಾನಗೊಳಿಸಿದ್ದರು. ಹೀಗೆ ಇಬ್ಬರ ಮಧ್ಯೆ ಜಟಾಪಟಿ ನಡೆದಿತ್ತು.

ADVERTISEMENT

ಭೀಮಾ ನಾಯ್ಕ ಬಿಜೆಪಿ ಸೇರುವ ವಿಷಯವನ್ನು ಆನಂದ್‌ ಸಿಂಗ್‌ ಬಹಿರಂಗ ಪಡಿಸಿದ ನಂತರ ಇಬ್ಬರ ನಡುವಿನ ಕಿತ್ತಾಟ ತಾರಕಕ್ಕೆ ಏರಿತ್ತು. ಈ ವಿಷಯವಾಗಿಯೇ ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಅಲ್ಲಿಯೇ ಇದ್ದ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರು ಮಧ್ಯ ಪ್ರವೇಶಿಸಿ, ಸಿಂಗ್‌ ಮೇಲೆ ಹಲ್ಲೆ ನಡೆಸಿದ್ದರು.

ಈ ಬೆಳವಣಿಗೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಕಾಂಗ್ರೆಸ್‌ ವರಿಷ್ಠರು, ಇಬ್ಬರು ಶಾಸಕರ ನಡುವೆ ರಾಜಿ ಸಂಧಾನ ನಡೆಸಿದ್ದಾರೆ. ಈ ಬೆಳವಣಿಗೆ ಕುರಿತು ಆನಂದ್‌ ಸಿಂಗ್‌, ಭೀಮಾ ನಾಯ್ಕ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

‘ಫ್ಲೆಕ್ಸ್‌ ತೆರವುಗೊಳಿಸಿರುವ ವಿಷಯ ಗೊತ್ತಿಲ್ಲ. ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌ ಸರಿಯಾಗಿ ಸ್ಪಂದಿಸದ ಕಾರಣ ಸಂಘದ ಹೆಸರಿನಲ್ಲಿ ಆರಂಭಿಸಿದ್ದ ವಾಟ್ಸ್‌ಆ್ಯಪ್‌ ಗ್ರುಪ್‌ ಡಿಲೀಟ್‌ ಮಾಡಲಾಗಿದೆ’ ಎಂದು ಅಭಿಮಾನಿ ಸಂಘದ ಸಂಚಾಲಕ ವೆಂಕಟೇಶ್‌ ಅಂಕಸಮುದ್ರ ತಿಳಿಸಿದರು.

‘ಇಬ್ಬರು ಶಾಸಕರ ನಡುವೆ ಸಂಧಾನ ಆಗಿರಬಹುದು. ಹೀಗಾಗಿ ಕಚೇರಿ ಉದ್ಘಾಟನೆಗೂ ಮುನ್ನವೇ ಬೀಗ ಹಾಕಿದ್ದಾರೆ. ಫ್ಲೆಕ್ಸ್‌ ತೆಗೆದಿರಬಹುದು’ ಎಂದು ಕಟ್ಟಡದ ಮಾಲೀಕ ತಿರುಮಲೇಶ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.