ADVERTISEMENT

ಜಾರಕಿಹೊಳಿ ಭೇಟಿ ಮಾಡಿದ ಶಾಸಕರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 19:30 IST
Last Updated 24 ನವೆಂಬರ್ 2020, 19:30 IST
ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸದಲ್ಲಿ ಸಭೆ ಸೇರಿದ್ದ ಶಾಸಕರು
ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸದಲ್ಲಿ ಸಭೆ ಸೇರಿದ್ದ ಶಾಸಕರು   

ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿಯ ಕೆಲವು ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕೆಲ ವಾರಗಳ ಹಿಂದಷ್ಟೇ, ಸುಮಾರು 10 ಶಾಸಕರು ಜಾರಕಿಹೊಳಿಯನ್ನು ಭೇಟಿ ಮಾಡಿ ಸಭೆ ಮಾಡಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿತ್ತು. ಅಂದಿನ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನವನ್ನು ನೀಡಬಾರದು ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದರು.

ಇಂದು ಸಿ.ಪಿ.ಯೋಗೇಶ್ವರ್ ಅವರು ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲದೆ, ಅವರ ಜತೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ರಾಜೂಗೌಡ, ಡಾ.ಶಿವರಾಜ ಪಾಟೀಲ, ಪ್ರತಾಪಗೌಡ ಪಾಟೀಲ ಮತ್ತು ಸಂಸದ ಅಣ್ಣಾ ಸಾಹೇಬ ಜೊಲ್ಲೆ ಇದ್ದರು.

ADVERTISEMENT

‘ನಾವು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ನಮ್ಮ ಪರವಾಗಿ ಮುಖ್ಯಮಂತ್ರಿಯವರ ಮನವೊಲಿಸಬೇಕು’ ಎಂದು ಶಾಸಕರು ಮನವಿ ಮಾಡಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಾರಕಿಹೊಳಿ ಮುಖ್ಯಮಂತ್ರಿಯವರ ಜತೆ ಮಾತನಾಡುವುದಾಗಿ ಭರವಸೆ ನೀಡಿದರೆಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ನ ಮಾಜಿ ಶಾಸಕ ಕ್ಯಾತ್ಸಂದ್ರ ರಾಜಣ್ಣ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು. ವಾಲ್ಮೀಕಿ ನಾಯಕ ಸಮುದಾಯದ ಮೀಸಲಾತಿ ಹೆಚ್ಚಿಸುವ ಬಗ್ಗೆಯೂ ಮಾತುಕತೆ ನಡೆಯಿತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.