ADVERTISEMENT

ಪರಿಷತ್‌ ಚುನಾವಣೆ: ಜೆಡಿಎಸ್‌ನಲ್ಲಿ ಅಪಸ್ವರ, ಸವದಿ ನಿರಾಳ?

ಕಣದಿಂದ ಅನಿಲ್ ಕುಮಾರ್ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 20:57 IST
Last Updated 15 ಫೆಬ್ರುವರಿ 2020, 20:57 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಂಗಳೂರು: ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಸೋಮವಾರ(ಫೆ.17) ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಬಿ.ಆರ್.ಅನಿಲ್ ಕುಮಾರ್ ಕೊನೆಯ ಕ್ಷಣದಲ್ಲಿಕಣದಿಂದ ಹಿಂದೆ ಸರಿದಿದ್ದು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗೆಲುವಿನ ಹಾದಿ ಸಲೀಸಾದಂತಾಗಿದೆ.

ನಾಯಕತ್ವದ ವಿರುದ್ಧ ಜೆಡಿಎಸ್‌ನಲ್ಲಿ ಒಳಗಿರುವ ಅಪಸ್ವರ ಈ ಚುನಾವಣೆ ವೇಳೆ ಹೊರಬಿದ್ದು, ಪಕ್ಷದ ಇಬ್ಭಾಗವಾಗುವ ಭೀತಿ ಎದುರಾಗಿದ್ದರಿಂದಾಗಿ ಕೊನೆಕ್ಷಣದಲ್ಲಿ ಅನಿಲ್‌ ಕುಮಾರ್‌ಗೆ ಬೆಂಬಲಿಸದೇ ಇರುವ ನಿರ್ಧಾರವನ್ನು ಆ ಪಕ್ಷದ ನಾಯಕರು ಕೈಗೊಂಡರು. ಹೀಗಾಗಿ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಅನಿಲ್‌ ಅವರು ಚುನಾವಣೆಯಿಂದ ನಿವೃತ್ತಿ ಘೋಷಿಸಿದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರನ್ನು ಭೇಟಿಯಾದ ಅನಿಲ್‌ ಕುಮಾರ್‌, ನಾಮಪತ್ರ ವಾಪಸ್ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಆದರೆ, ‘ವಾಪಸ್ ಪಡೆಯುವ ಸಮಯ ಮುಗಿದು ಹೋಗಿದೆ’ ಎಂದು ಕಾರ್ಯದರ್ಶಿ ಹೇಳಿದರು.

ADVERTISEMENT

ಬಳಿಕ ಮಾತನಾಡಿದ ಅನಿಲ್ ಕುಮಾರ್,‘ನಾನು ಚುನಾವಣೆಯಿಂದ ನಿವೃತ್ತಿ ತೆಗೆದುಕೊಳ್ಳುತ್ತಿ ದ್ದೇನೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಬೆಂಬಲ ಕೊಟ್ಟಿದ್ದರು. ನನಗೆ ಯಾರೂ ಬ್ಲಾಕ್‌ಮೇಲ್‌ ಮಾಡಿಲ್ಲ. ಕಾಂಗ್ರೆಸ್, ಜೆಡಿಎಸ್‌ಗೆ ಮುಜುಗರ ಆಗಬಾರದು.ನನ್ನ ಧಾರ್ಮಿಕ ಗುರುಗಳು ನನಗೆ ಈ ನಿಟ್ಟಿನಲ್ಲಿಆದೇಶ ಮಾಡಿದ್ದಾರೆ. ನಿವೃತ್ತಿಯಾಗುತ್ತಿದ್ದೇನೆ’ ಎಂದರು.

ಸಂಪರ್ಕ: ಬಿಜೆಪಿಯ ಮತಗಳು ಅನಿಲ್‌ ಕುಮಾರ್‌ ಅವರಿಗೆ ಬಿದ್ದರೆ ಸೋಲಬೇಕಾಗುತ್ತದೆ ಎಂಬ ಭಯದಲ್ಲಿ ಪ್ರತಿತಂತ್ರ ರೂಪಿಸಿದ್ದ ಲಕ್ಷ್ಮಣ ಸವದಿ ಹಾಗೂ ಬಿಜೆಪಿಯ ಕೆಲವು ನಾಯಕರು, ಜೆಡಿಎಸ್‌–ಕಾಂಗ್ರೆಸ್‌ನ ಶಾಸಕರನ್ನು ಸಂಪರ್ಕಿಸಿದ್ದರು. ರಹಸ್ಯ ಮತದಾನ ಪದ್ಧತಿಯಾಗಿರುವುದರಿಂದಾಗಿ, ಅವಶ್ಯ ಬಿದ್ದರೆ ಮತ ಹಾಕುವಂತೆಯೂ ಕೋರಿಕೊಂಡಿದ್ದರು. ಜೆಡಿಎಸ್‌ನ 11 ಹಾಗೂ ಕಾಂಗ್ರೆಸ್ 4 ಶಾಸಕರ ಜತೆ ಮಾತುಕತೆ ನಡೆಸಲಾಗಿತ್ತು ಎಂದು ಬಿಜೆಪಿ ಮೂಲಗಳು ಹೇಳಿವೆ.

ತಂತ್ರಗಾರಿಕೆ ಬದಲಿಸಿದ ಬಿಜೆಪಿ, ‘ನಿಮ್ಮ ಶಾಸಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ’ ಎಂದು ಜೆಡಿಎಸ್‌ ನಾಯಕರಿಗೆ ಸಂದೇಶ ರವಾನಿಸಿತು. ಚುನಾವಣೆ ನಡೆದರೆ ಪಕ್ಷದ 34 ಮತಗಳ ಪೈಕಿ 10–12 ಮತಗಳು ಬಿಜೆಪಿ ಪಾಲಾಗಿ, ಪಕ್ಷ ಆಂತರಿಕ ಸಂಘರ್ಷ ಬಯಲಿಗೆ ಬರುತ್ತದೆ ಎಂಬ ಕಾರಣದಿಂದ ಜೆಡಿಎಸ್ ನಾಯಕರು ಹಿಂದೆ ಸರಿದರು. ಹೀಗಾಗಿ, ಅನಿಲ್ ಕುಮಾರ್ ನಿವೃತ್ತಿ ಪ್ರಕಟಿಸಿದರು ಎಂದು ಹೇಳಲಾಗುತ್ತಿದೆ.

ಶಾಂತಿ ಕದಡಲು ಬಿಡೆವು: ಎಚ್‌ಡಿಕೆ
ರಾಮನಗರ: ‘ಅವರು ಯಾರೋ ಚಡ್ಡಿ ಹಾಕಿಕೊಂಡು ಬಾಡಿಗೆ ಜನರನ್ನು ಕರೆತಂದು ರಾಮನಗರದಲ್ಲಿ ಪಥ ಸಂಚಲನ ಮಾಡಿದರೆ ನಾನು ಹೆದರುವವನಲ್ಲ. ರಾಮನಗರ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ನಾಯಕ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದರು.

ಚನ್ನಪಟ್ಟಣದಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಕೆಲವರು ಕೇಸರಿ ಬಾವುಟ ಹಿಡಿದು ಶಾಂತಿ ಕದಡಲು ಬಂದಿದ್ದಾರೆ. ಅಂತಹವರಿಗೆ ಜನ ಬೆಂಬಲ ನೀಡುವುದಿಲ್ಲ. ಆರ್‌ಎಸ್‌ಎಸ್‌ ಮೂಲಕ ಬಿಜೆಪಿ ನಡೆಸಿರುವ ಈ ಪ್ರಯತ್ನದಿಂದ ಯಾರಿಗೂ ಪ್ರಯೋಜನ ಇಲ್ಲ. ರಾಮನಗರ ಜೆಡಿಎಸ್‌ ಭದ್ರಕೋಟೆ ಆಗಿಯೇ ಉಳಿಯಲಿದೆ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.