
ಸುವರ್ಣ ವಿಧಾನಸೌಧ (ಬೆಳಗಾವಿ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕೊಡಗು ಜಿಲ್ಲಾ ಅಧಿಕಾರಿ ಕೆ.ಆರ್.ಕೃಷ್ಣಮೂರ್ತಿ ಅವರು ವಿಧಾನ ಪರಿಷತ್ತಿನ ಸದಸ್ಯ ಎಂ.ಪಿ.ಕುಶಾಲಪ್ಪ ಅವರ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ ವಿಚಾರವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದ ಹಕ್ಕುಭಾದ್ಯತಾ ಸಮಿತಿಗೆ ವಹಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಕಲಾಪದ ವೇಳೆ ಕುಶಾಲಪ್ಪ ಅವರು, ‘ವಿಧಾನ ಪರಿಷತ್ತಿನ ಸದಸ್ಯರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿನಿಲಯಗಳಿಗೆ ಭೇಟಿ ನೀಡಿ, ವರದಿ ನೀಡಲಿ ಎಂದು ಕೃಷ್ಣಮೂರ್ತಿ ಅವರು ಮಾಧ್ಯಮಗಳ ಮೂಲಕ ಸವಾಲು ಹಾಕಿದ್ದಾರೆ. ಇದು ಸದನಕ್ಕೆ ಮಾಡಿರುವ ಅವಮಾನ’ ಎಂದು ವಿಷಯ ಪ್ರಸ್ತಾಪಿಸಿದರು. ಈ ವಿಚಾರವನ್ನು ಸದನದ ಹಕ್ಕು ಭಾದ್ಯತಾ ಸಮಿತಿಗೆ ವಹಿಸಬೇಕು ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕೋರಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಭಾನಾಯಕ ಎನ್.ಎಸ್.ಬೋಸರಾಜು ಅವರು, ‘ಈ ವಿಚಾರದ ಬಗ್ಗೆ ಜಿಲ್ಲಾ ಅಧಿಕಾರಿ ಅವರಿಂದ ವರದಿ ಕೇಳಲಾಗಿದೆ. ವರದಿ ಬಂದ ತಕ್ಷಣವೇ ಸಂಬಂಧಿತ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು. ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಇದು ಅತ್ಯಂತ ಗಂಭೀರವಾದ ವಿಚಾರ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಭಾನಾಯಕರು ಹೇಳಿದ್ದಾರೆ. ಈ ವಿಷಯವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ವಹಿಸುತ್ತಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.