ADVERTISEMENT

ಬಡವರು, ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ: ಜಿ.ಕುಮಾರನಾಯಕ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 10:22 IST
Last Updated 12 ಜನವರಿ 2026, 10:22 IST
ಜಿ.ಕುಮಾರನಾಯಕ
ಜಿ.ಕುಮಾರನಾಯಕ   

ರಾಯಚೂರು: ‘ರೈತರ, ದುಡಿಯುವ ವರ್ಗದ, ಕೃಷಿ, ಕೂಲಿ ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ ತಂಡು ವಿಬಿ ರಾಮಜಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಗ್ರಾಮೀಣ ಜನರ ಉದ್ಯೋಗ ಕಸಿಯಲಾಗಿದೆ‘ ಎಂದು ರಾಯಚೂರು ಸಂಸದ ಜಿ.ಕುಮಾರನಾಯಕ ವಾಗ್ದಾಳಿ ನಡೆಸಿದರು.

‘ಶೋಷಿತ ಹಾಗೂ ದುಡಿಯುವ ವರ್ಗದ ಮೂಲಭೂತ ಹಕ್ಕಿಗೆ ಕೊಡಲಿ ಏಟು ಕೊಡಲಾಗಿದೆ. ನರೇಗಾದಲ್ಲಿ ಎಲ್ಲ ಗ್ರಾಮಗಳಲ್ಲೂ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಿತ್ತು. ಆದರೆ, ಇದೀಗ ಆಯ್ದ ಗ್ರಾಮಗಳಲ್ಲಿ ಅದರಲ್ಲೂ ಕೇಂದ್ರ ಒಪ್ಪಿಗೆ ನೀಡಿದರೆ ಮಾತ್ರ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿದೆ‘ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಹೊಸ ಕಾಯ್ದೆಯಿಂದ ದೇಶದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಅನ್ಯಾಯವಾಗಲಿದೆ. ಉದ್ಯೋಗವು ಸಾಂವಿಧಾನಿಕ ಹಕ್ಕು. ಅದು ನಿರಂತರವಾಗಿ ಲಭ್ಯವಾಗಬೇಕು. ಆದರೆ, ಪ್ರತಿ ಗ್ರಾಮದಲ್ಲೂ ನಿರಂತರ ಉದ್ಯೋಗಕ್ಕೆ ಕಡಿವಾಣ ಹಾಕಲಾಗಿದೆ’ ಎಂದು ದೂರಿದರು.

ADVERTISEMENT

‘ಕೆಲಸ ಕೇಳುವ ಪ್ರತಿಯೊಬ್ಬರಿಗೂ ಕೆಲಸ ಮತ್ತು ನ್ಯಾಯಬದ್ಧ ಕೂಲಿ ಸಿಗಬೇಕು ಎನ್ನುವುದು ಕಾನೂನಾತ್ಮಕ ಹಕ್ಕು. ಆದರೆ, ವಿಬಿ ರಾಮಜಿಯಲ್ಲಿ ಕೇಂದ್ರ ಸರ್ಕಾರ ತಾನ ಪೂರ್ವನಿಗದಿಪಡಿಸಿದ ಯೋಜನೆ ಹಣ ವೆಚ್ಚವಾದ ತಕ್ಷಣ ಕೆಲಸ ನಿಲ್ಲುತ್ತದೆ. ಇಲ್ಲಿ ಜನರ ಬೇಡಿಕೆಗೆ ಯಾವುದೇ ಬೆಲೆ ಇಲ್ಲ’ ಎಂದು ಹೇಳಿದರು.

‘ನೂತನ ಮಂಡಳಿ ಮತ್ತು ಚಾಲನಾ ಸಮಿತಿಗಳಿಗೆ ಅಸ್ಪಷ್ಟ ಅಧಿಕಾರ ಕೊಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಕಡ್ಡಾಯ ಪ್ರಾತಿನಿಧ್ಯತೆ ಅಧಿಕಾರ ರದ್ದುಗೊಳಿಸಲಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸುವ ಅನುದಾನದಲ್ಲಿ ಶೇಕಡ 40ರಷ್ಟು ಹಣವನ್ನು ರಾಜ್ಯವೇ ಭರಿಸಬೇಕು. ಯೋಜನೆ ಜಾರಿಯಲ್ಲಿ ಅಧಿಕಾರಿಗಳೇ ಇಲ್ಲದಿದ್ದರೂ ರಾಜ್ಯ ಹಾಗೂ ಪಂಚಾಯಿತಿಗಳ ಮೇಲೆ ಆರ್ಥಿಕ ಹೊರೆ ಬೀಳಲಿದೆ‘ ಎಂದು ವಿವರಿಸಿದರು.

‘ನರೇಗಾದಲ್ಲಿ 365 ದಿನ ಯಾವ ಸಮಯದಲ್ಲಾದರೂ ಕೆಲಸ ಕೇಳಬಹುದಿತ್ತು. ಯಾರ ಮುಲಾಜಿಗೂ ಬೀಳದಂತೆ ಬಡಜನರ ವರ್ಷಪೂರ್ತಿ ಬೇಡಿಕೆ ಆಧಾರದ ಮೇಲೆ ಉದ್ಯೋಗಕ್ಕೆ ಒತ್ತಾಯಿಸುವ ವ್ಯವಸ್ಥೆ ಇತ್ತು. ಹೊಸ ವಿಬಿ ರಾಮಜಿಯಲ್ಲಿ ಪೂರ್ವ ನಿರ್ಧಾರಿತ 60 ದಿನ ಕೆಲಸಕ್ಕೆ ನಿರ್ಬಂಧ ವಿಧಿಸಲಾಗಿದೆ’ ಎಂದು ತಿಳಿಸಿದರು.

‘ಗ್ರಾಮ ಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಅವಶ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ಮೊಟಕುಗೊಳಿಸಲಾಗಿದೆ ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಗ್ರಾಮಗಳ ಸ್ವಯಂ ಆಡಳಿತದ ಹಕ್ಕನ್ನು ಮರುಸ್ಥಾಪಿಸಬೇಕು. ನರೇಗಾ ಉಳಿಸಿ, ಉದ್ಯೋಗದ ಹಕ್ಕು ಹಳಿಸಬೇಕು. ಕನ್ನಡಿಗರ ಮೇಲಿನ ಸರಣಿ ಅನ್ಯಾಯಕ್ಕೆ ಕೊನೆ ಹಾಡಬೇಕು’ ಎಂದು ಒತ್ತಾಯಿಸಿದರು.

‘ಜೀತ ಪದ್ಧತಿ ತೊಲಗಿಸಲು ನರೇಗಾ ನೆರವಾಗಿತ್ತು. ಮೂಲ ನರೇಗಾ ರದ್ದುಪಡಿಸಿರುವ ಕಾರಣ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗಲಿದೆ. ಕನಿಷ್ಠ ವೇತನದ ರಕ್ಷಣೆಯಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಾರ್ಮಿಕರ ಶೋಷಣೆ ಹಾಗೂ ಒತ್ತಡ ಹೆಚ್ಚಲಿದೆ. ಬಲವಂತದ ವಲಸೆ, ಗ್ರಾಮೀಣ ಜೀವನೋಪಾಯಗಳ ಕುಸಿತ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ನರೇಗಾ ಪ್ರಗತಿ:

‘2023ರಿಂದ ಇಲ್ಲಿಯ ವರೆಗೆ 36 ಕೋಟಿ ಮಾನವ ಕೆಲಸ ದಿನಗಳ ಸೃಷ್ಟಿ ಮಾಡಿ 1 ಕೋಟಿ ಕುಟುಂಬಗಳಿಗೆ ಲಾಭ ದೊರಕುವಂತೆ ಮಾಡಲಾಗಿದೆ. 14 ಲಕ್ಷ ಗ್ರಾಮೀಣ ಆಸ್ತಿಗಳ ಸೃಜನೆ ಮಾಡಲಾಗಿದೆ. 10 ಲಕ್ಷ ಪರಿಶಿಷ್ಟ ಪಂಗಡಗಳ ಜನರಿಗೆ ಕೆಲಸ ಕೊಡಲಾಗಿದೆ’ ಎಂದು ತಿಳಿಸಿದರು.

‘ಬಡವರು ಹಾಗೂ ಶೋಷಿತ ಹಕ್ಕುಗಳ ಪರವಾಗಿ ಹೋರಾಟ ನಡೆಸಿದರೆ ಎಡಪಂಥೀಯ ಹಾಗೂ ನಕ್ಸಲರು ಎನ್ನುವ ಪಟ್ಟ ಕಟ್ಟುತ್ತಾರೆ. ಕಾರ್ಪೋರೇಟ್‌ ಕಂಪನಿಗಳಿಗೆ ₹ 47 ಸಾವಿರ ಕೋಟಿ ರಿಯಾಯಿತಿ ನೀಡಲಾಗಿದೆ. ಬಡವರ ಹಕ್ಕು ಕಸಿಯಲಾಗಿದೆ. ಅಗತ್ಯವೇ ಇಲ್ಲದಿದ್ದರೂ ರಾಮನ ಹೆಸರು ತುರಿಸಿ ಅಪಹಾಸ್ಯ ಮಾಡಲು ಹೊರಟಿದ್ದಾರೆ’ ಎಂದರು.

‘ನಾವು ರಾಮನನ್ನು ವಿರೋಧಿಸುವುದಿಲ್ಲ. ರಾಮ ನಮ್ಮ ಹೃದಯದಲ್ಲಿ ಇದ್ದಾನೆ. ರಾಮನ ಹೆಸರಲ್ಲಿ ನಾವು ರಾಜಕೀಯ ಮಾಡುವುದಿಲ್ಲ‘ ಎಂದು ಸ್ಪಷ್ಟಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.