ADVERTISEMENT

ರೈಲು ಪ್ರಯಾಣಿಕರಿಂದ ಮೊಬೈಲ್ ಕಿತ್ತುಕೊಳ್ಳಲು ಮಚ್ಚು ಬೀಸಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 4:19 IST
Last Updated 25 ಅಕ್ಟೋಬರ್ 2018, 4:19 IST
   

ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಜಾನುಕುಂಟೆ ರೈಲು ನಿಲ್ದಾಣದ ಸಮೀಪ ಗುರುವಾರ ಬೆಳಿಗ್ಗೆ 8:45ಕ್ಕೆ ಹಿಂದೂಪುರ-ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕರಿಂದ ಮೊಬೈಲ್ ಕಿತ್ತುಕೊಳ್ಳಲು ಗಾಂಜಾ ಮತ್ತಿನಲ್ಲಿದ್ದ ದುಷ್ಕರ್ಮಿಗಳು ಮಚ್ಚು ಬೀಸಿದ ಘಟನೆ ನಡೆದಿದೆ.

ಘಟನೆಯಲ್ಲಿ ದೊಡ್ಡಬಳ್ಳಾಪುರದ ವಿದ್ಯಾರ್ಥಿ ಅಮಿತ್ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಉರುಳಿಬಿದ್ದ ಪರಿಣಾಮ ಮೂಗಿಗೆ ಗಾಯವಾಗಿದೆ. ಮತ್ತೊಬ್ಬ ಪ್ರಯಾಣಿಕ ಶಿಡ್ಲಘಟ್ಟದ ನಾಗೇಶ್ ಅವರ ಕೈಗೆ ತರಚು ಗಾಯಗಳಾಗಿವೆ.

ಆತಂಕಗೊಂಡ ಪ್ರಯಾಣಿಕರು ರಾಜಾನುಕುಂಟೆ ಸಮೀಪ ಚೈನ್‌ ಎಳೆದು ರೈಲನ್ನು ನಿಲ್ಲಿಸಿದರು. ಕೆಲ ಯುವಕರು ಕಲ್ಲುಗಳನ್ನು ಹಿಡಿದು ದುಷ್ಕರ್ಮಿಗಳನ್ನು ಅಟ್ಟಿಸಿಕೊಂಡು ಹೋದರು.

ADVERTISEMENT

ರಾಜಾನುಕುಂಟೆ ರೈಲು ನಿಲ್ದಾಣ ಮತ್ತು ರಾಜಾನುಕುಂಟೆ ಪೊಲೀಸ್ ಠಾಣೆಯ ಸಮೀಪ ಪ್ರತಿದಿನ ರೈಲು ಪ್ರಯಾಣಿಕರಿಂದ ಮೊಬೈಲ್ ಕಿತ್ತುಕೊಳ್ಳುವ ಪ್ರಕರಣಗಳು ನಡೆಯುತ್ತಿವೆ. ದುಷ್ಕರ್ಮಿಗಳೊಡನೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರೈಲ್ವೆ ಇಲಾಖೆಯ ಕೆಲ ಸಿಬ್ಬಂದಿ, ‘ಬಾಗಿಲಿನಲ್ಲಿ ನಿಂತಿದ್ದು ನಿಮ್ಮ ತಪ್ಪು’ ಎಂದು ಯುವಕರನ್ನೇ ದೂರಿದಾಗ ಪ್ರಯಾಣಿಕರು ಸಹನೆ ಕಳೆದುಕೊಂಡರು. ‘ಕೆಳಗೆ ನಿಂತವರು ಮಚ್ಚು ಬೀಸಿದರೂ ನಿಮಗೆ ತಪ್ಪು ಅನ್ನಿಸುವುದಿಲ್ಲ. ರಶ್ ಆಗಿರುವ ರೈಲಿನಲ್ಲಿ ಜಾಗ ಇರುವ ಸ್ಥಳದಲ್ಲಿ ನಿಲ್ಲಬೇಕಾಗುತ್ತದೆ. ನಿಮಗೆ ಇದು ಅರ್ಥವಾಗುವುದಿಲ್ಲವೇ’ ಎಂದು ಹರಿಹಾಯ್ದರು.

ಯಲಹಂಕ, ಯಶವಂತಪುರ ಔಟರ್‌ ರಿಂಗ್‌ ರೋಡ್‌ಗಳಲ್ಲಿ ರೈಲು ಪ್ರಯಾಣಿಕರ ಮೊಬೈಲ್ ಕಿತ್ತುಕೊಳ್ಳುವುದು ಸಾಮಾನ್ಯ ವಿದ್ಯಮಾನ ಎನಿಸಿದೆ. ಪ್ರಯಾಣಿಕರ ಸುರಕ್ಷೆಗೆ ರೈಲ್ವೆ ಇಲಾಖೆ ಗಮನ ಕೊಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.