ADVERTISEMENT

ಮಾದರಿ ನೀತಿಸಂಹಿತೆ ಉಲ್ಲಂಘನೆ: ಸಿ.ಎಂ. ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:17 IST
Last Updated 1 ಡಿಸೆಂಬರ್ 2019, 11:17 IST

ಬೆಳಗಾವಿ: ಕಾಗವಾಡ ತಾಲ್ಲೂಕಿನ ಶಿರಗುಪ್ಪಿಯಲ್ಲಿ ಹಾಗೂ ಗೋಕಾಕದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ‘ವೀರಶೈವ’ ಸಮಾಜದ ಹೆಸರು ಬಳಕೆ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಪಕ್ಷದ ಅಭ್ಯರ್ಥಿಗಳಾದ ಶ್ರೀಮಂತ ಪಾಟೀಲ ಹಾಗೂ ರಮೇಶ ಜಾರಕಿಹೊಳಿ ಪರವಾಗಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು, ‘ವೀರಶೈವ ಸಮಾಜದ ಒಂದೂ ಮತವು ಬೇರೆ ಕಡೆ ಹೋಗಬಾರದು’ ಎಂದು ಹೇಳಿಕೆ ನೀಡಿದ್ದರು.

ಗೋಕಾಕ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರು ವೀರಶೈವ ಲಿಂಗಾಯತ ಸಮಾಜದ ಸಂಕೇತವಾಗಿರುವ ಜೋಳಿಗೆಯನ್ನು ಹಾಕಿಕೊಂಡು ಸಮಾಜದ ಜನರಿಂದ ಹಣ ಮತ್ತು ಮತಗಳನ್ನು ಯಾಚನೆ ಮಾಡುತ್ತಿರುವುದರ ವಿರುದ್ಧ ದೂರು ದಾಖಲಾಗಿದೆ.

ADVERTISEMENT

ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರ ನಿವಾಸದಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಅವರು ಅನುಮತಿ ಪಡೆಯದೇ ಖಿಳೇಗಾಂವದಲ್ಲಿ ಚುನಾವಣಾ ಪ್ರಚಾರ ನಡೆಸಿರುವುದಕ್ಕೆ ದೂರು ದಾಖಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ ಮೂರು ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 5 ದೂರುಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.